ಉದಯವಾಹಿನಿ, ಬೆಂಗಳೂರು: ದಟ್ಟಕಾನನದ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆ ಕುರಿತು ದಿನಕ್ಕೊಂದು ವಿಷಯಗಳು ಬಯಲಾಗುತ್ತಿದ್ದು, ಸದ್ಯ ಆಕೆಯ ಪ್ರಿಯಕರ ತನ್ನ ಮಕ್ಕಳನ್ನು ಹುಡುಕಿಕೊಂಡು ಬಂದಿದ್ದಾರೆ. ಮಹಿಳೆ ನೀನಾ ಕುಟಿನಾ ರಷ್ಯಾ ಪ್ರಜೆಯಾಗಿದ್ದು, ಪ್ರಿಯಕರ ಇಸ್ರೇಲ್ ಪ್ರಜೆ ಡ್ರೋರ್ ಗೋಲ್ಡ್ ಸ್ಪೇನ್ ವ್ಯಾಪಾರಿ, ಮ್ಯೂಜಿಸಿಯನ್ ಆಗಿದ್ದರು. ಮಕ್ಕಳನ್ನು ಪ್ರಿಯಾ ಮತ್ತು ಅಮಾ ಎಂದು ಗುರುತಿಸಲಾಗಿದೆ. ಸುದ್ದಿ ಮಾಧ್ಯಮದೊಂದಿಗೆ ಪ್ರಿಯಕರ ಮಾತನಾಡಿ, ಗೋವಾಗೆ ತೆರಳಿದ್ದಾಗ ನೀನಾ ಕುಟಿನಾ ಹಾಗೂ ನನ್ನ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. 2017ರಿಂದ 2024ರವರೆಗೂ ನಾವಿಬ್ಬರು ಲಿವಿಂಗ್ ಟುಗೆದರ್ ರಿಲೇಷನ್‌ಶಿಪ್‌ನಲ್ಲಿದ್ದೆವು. ವರ್ಷದಲ್ಲಿ ಆರು ತಿಂಗಳು ಗೋವಾದಲ್ಲಿ ಇರುತ್ತಿದ್ದೆವು. ಇಬ್ಬರು ಕೂಡ ದೊಡ್ಡದಾದ ವಿಲ್ಲಾದಲ್ಲಿ ವಾಸವಾಗಿದ್ದೆವು. 2019ರಿಂದಲೂ ನಾನು ಆಕೆಗೆ ಪ್ರತಿ ತಿಂಗಳು 400 ಡಾಲರ್ (3.5 ಲಕ್ಷ) ಹಣವನ್ನು ಕೊಡುತ್ತಿದ್ದೆ. ಆದರೆ 2024ರ ಡಿಸೆಂಬರ್‌ನಲ್ಲಿ ನೀನಾ ಯಾವುದೇ ಮಾಹಿತಿ ನೀಡದೇ ಗೋವಾದಿಂದ ಹೊರಟು ಹೋಗಿದ್ದಳು. ಬಳಿಕ ನಾನು ಪಣಜಿಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ಕೊಟ್ಟಿದೆ. ಬಳಿಕ ಮಾರ್ಚ್ ತಿಂಗಳಲ್ಲಿ ಆಕೆ ಮಕ್ಕಳ ಜೊತೆಗೆ ಗೋಕರ್ಣದಲ್ಲಿ ಇರುವುದು ಗೊತ್ತಾಗಿದೆ ಎಂದು ತಿಳಿಸಿದರು.
ನನ್ನ ಮಕ್ಕಳನ್ನು ನನಗೆ ಕೊಡಿ, ಸುರಕ್ಷಿತವಾದ ಜಾಗದಲ್ಲಿ ನನ್ನ ಮಕ್ಕಳು ಬೆಳೆಯಬೇಕು. ಆರು ವರ್ಷವಾದ್ರೂ ಶಿಕ್ಷಣ ಕೊಡಿಸಿಲ್ಲ. ಶಾಲೆಗೆ ಕಳಿಸಬೇಕು ಎಂದಿದ್ದಾರೆ. ಆದರೆ ಮಹಿಳೆ ಪ್ರಿಯಕರನ ಜೊತೆ ಮಕ್ಕಳನ್ನು ಕಳಿಸಲು ನಿರಾಕರಿಸುತ್ತಿದ್ದು, ಮಕ್ಕಳು ಪರಿಸರದಲ್ಲೇ ಬೆಳೆಯಬೇಕು ಎಂದು ವಾದ ಮಾಡುತ್ತಿದ್ದಾರೆ. ಇತ್ತ ಪ್ರಿಯಕರ ಮಕ್ಕಳಿಗೆ ಸೋಶಿಯಲ್ ಲೈಫ್ ಬೇಕು, ಎಜುಕೇಷನ್ ಬೇಕು, ಮಕ್ಕಳನ್ನು ಕಸ್ಟಡಿಗೆ ಕೊಡಿ ಎಂದು ಕೇಳಿಕೊಂಡಿದ್ದಾರೆ.
