ಉದಯವಾಹಿನಿ, ನವದೆಹಲಿ: ರಾಜ್ಯ ಬಿಜೆಪಿಯಲ್ಲಿ ರಾಜ್ಯಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಹಾಲಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಬದಲಿಸುವಂತೆ ವಿರೋಧಿ ಬಣದ ನಾಯಕರು ದೆಹಲಿಯಲ್ಲಿ ಪ್ರಯತ್ನ ನಡೆಸುತ್ತಿರುವ ಹೊತ್ತಲ್ಲೇ ರಾಜ್ಯಧ್ಯಕ್ಷರ ಪರ ಬ್ಯಾಟ್ ಮಾಡಲು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ನೇತೃತ್ವದ ತಂಡ ದೆಹಲಿಗೆ ಆಗಮಿಸಿದೆ.ಎಂ.ಪಿ ರೇಣುಕಾಚಾರ್ಯ ನೇತೃತ್ವದಲ್ಲಿ ದಾವಣಗೆರೆ ಜಿಲ್ಲಾ ನಾಯಕರಾದ ರಾಜಶೇಖರ್, ಮಾಡಾಳ್ ಮಲ್ಲಿಕಾರ್ಜುನ್ ಮತ್ತಿತರರು ದೆಹಲಿಯಲ್ಲಿ ಠಿಕಾಣಿ ಹೂಡಿದ್ದು ಹೈಕಮಾಂಡ್ ನಾಯಕರ ಭೇಟಿಗೆ ಸಮಯ ಕೇಳುತ್ತಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ರಾಜ್ಯಾಧ್ಯಕ್ಷರ ನೇಮಕ ಮಾಡಿರೋದು ನಮ್ಮ ಹೈಕಮಾಂಡ್. ಬಿ.ವೈ ವಿಜಯೇಂದ್ರ ಅವರು ಹಳೆ ಬೇರು ಹೊಸ ಚಿಗುರು ರೀತಿಯಲ್ಲಿ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಬದಲಿಸುವ ಅಗತ್ಯ ಇಲ್ಲ ಎಂದು ಹೇಳಿದರು. ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಹೈಕಮಾಂಡ್ ಜೊತೆಗೆ ಚರ್ಚಿಸಲು ದೆಹಲಿಗೆ ಬಂದಿಲ್ಲ. ಖಾಸಗಿ ಕಾರ್ಯಕ್ರಮ ಹಿನ್ನೆಲೆ ದೆಹಲಿ ಭೇಟಿ ಅಷ್ಟೇ. ಅವಕಾಶ ಸಿಕ್ಕರೆ ಹೈಕಮಾಂಡ್ ನಾಯಕರನ್ನು ಭೇಟಿಯಾಗುವೆ ಎಂದರು.
