ಉದಯವಾಹಿನಿ, ಲಂಡನ್:‌ ಇಂಗ್ಲೆಂಡ್‌ನ ಲಂಡನ್‌ನ ಲ್ಯಾಂಬೆತ್‌ನಲ್ಲಿರುವ ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಗೌರವ ನಮನ ಸಲ್ಲಿಸಿದರು. ಇಂಗ್ಲೆಂಡ್‌ ರಾಜಧಾನಿ ಲಂಡನ್‌ನಲ್ಲಿ ಸ್ಥಾಪಿಸಲಾಗಿರುವ 12ನೇ ಶತಮಾನದ ಮಹಾಮಾನವತಾವಾದಿ, ಕ್ರಾಂತಿಕಾರಿ ಸಮಾಜ ಸುಧಾರಕರೂ ಆದ ಬಸವಣ್ಣನವರ ಪ್ರತಿಮೆಯನ್ನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ 2015ರ ನ. 14ರಂದು ಅನಾವರಣಗೊಳಿಸಿದ್ದರು.

ಜಗಜ್ಯೋತಿ ಬಸವಣ್ಣನವರ ಪ್ರತಿಮೆ, ಥೇಮ್ಸ್ ನದಿ ಹಾಗೂ ಬ್ರಿಟಿಷ್ ಸಂಸತ್ ಭವನದ ನಡುವೆ ಪ್ರಶಾಂತ ವಾತಾವರಣವಿರುವ ತಾಣದಲ್ಲಿ ಸ್ಥಾಪಿತವಾಗಿದೆ. ಬಸವಣ್ಣನವರು ಸಾರಿದ ಸಮಾನತೆ, ಸ್ತ್ರೀ ಸ್ವಾತಂತ್ರ್ಯ, ವರ್ಣ ವರ್ಗರಹಿತ ಸಮಾಜ ಹಾಗೂ ಮಾನವೀಯ ಮೌಲ್ಯಗಳಿಗೆ ಈ ಪ್ರತಿಮೆಯು ಸಾಕ್ಷಿಯಾಗಿದೆʼʼ ಎಂದು ಶ್ರೀ ವಚನಾನಂದ ಮಹಾಸ್ವಾಮಿಗಳು ತಿಳಿಸಿದ್ದಾರೆ. ಮ್ಯಾಗ್ನಾ ಕಾರ್ಟಾ (1215) ರೂಪುಗೊಳ್ಳುವ ಒಂದು ಶತಮಾನಕ್ಕೂ ಹೆಚ್ಚು ಪೂರ್ವದಲ್ಲಿ ವಚನ ಸಂವಿಧಾನವು ಅನುಭವಮಂಟಪ ಮೂಲಕ ತಲೆಯೆತ್ತಿ ನಿಂತಿತ್ತು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದುʼʼ ಎಂದಿದ್ದಾರೆ. ಕಾಯಕ, ದಾಸೋಹ ಮತ್ತು ಶಿವಯೋಗ ಮೂಲಕ ಬಸವಾದಿ ಶರಣರ ಆದರ್ಶಗಳು ದೇಶ, ಕಾಲ, ಭಾಷೆಯ ಸೀಮೆ ಮೀರಿ ಮಾನವೀಯ ಮೌಲ್ಯಗಳ ದೀಪಸ್ತಂಭದಂತೆ ನಿಂತಿವೆʼʼ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!