ಉದಯವಾಹಿನಿ, ಧಾರವಾಡ: ಕೆಲ ತಿಂಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ) ಅವರಿಂದ ಅವಮಾನಕ್ಕೀಡಾಗಿ ರಾಜೀನಾಮೆಗೆ ಮುಂದಾಗಿದ್ದ ಧಾರವಾಡ ಎಎಸ್‌ಪಿ ನಾರಾಯಣ ವಿ. ಭರಮನಿ ಅವರಿಗೆ ಇದೀಗ ರಾಜ್ಯ ಸರ್ಕಾರ ಪದೋನ್ನತಿ ನೀಡಿದ್ದು, ಬೆಳಗಾವಿ ಕಾನೂನು ಸುವ್ಯವಸ್ಥೆಯ ಉಪ ಪೊಲೀಸ್‌ ಆಯುಕ್ತ (ಡಿಸಿಪಿ)ರಾಗಿ ನೇಮಿಸಿದೆ. ಆ ಮೂಲಕ ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ಗುರುವಾರ (ಜು. 17) ಸರ್ಕಾರ ಆದೇಶ ಹೊರಡಿಸಿದೆ.

ಧಾರವಾಡ ಜಿಲ್ಲಾ ಹೆಚ್ಚುವರಿ ‍ಪೊಲೀಸ್‌ ಅಧೀಕ್ಷಕ ನಾರಾಯಣ ಭರಮನಿ ಅವರನ್ನು ಬೆಳಗಾವಿ ಡಿಸಿಪಿಯನ್ನಾಗಿ ನೇಮಿಸಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ. ಸಾರ್ವಜನಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮೇಲೆ ಕೈ ಎತ್ತಿದ್ದರು ಎಂಬ ಕಾರಣಕ್ಕೆ ಬೇಸರಗೊಂಡಿದ್ದ ಭರಮನಿ ರಾಜೀನಾಮೆಗೆ ಮುಂದಾಗಿದ್ದರು. ಈ ವಿಚಾರ ರಾಜ್ಯಾದ್ಯಂತ ಸದ್ದು ಮಾಡಿದ್ದಲ್ಲದೆ ಸರ್ಕಾರ ತೀವ್ರ ಮುಜುಗರ ಅನುಭವಿಸಿತ್ತು. ದಕ್ಷ ಅಧಿಕಾರಿಯೊಬ್ಬರು ತಮ್ಮದಲ್ಲದ ತಪ್ಪಿಗೆ ರಾಜೀನಾಮೆ ನೀಡುತ್ತಿದ್ದಾರೆ ಎಂದು ಸಾವರ್ಜನಿಕರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು.

ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣದ ವೇಳೆ ವೇದಿಕೆಯಲ್ಲಿ ಭರಮನಿ ಅವರಿಗೆ ಹೊಡೆಯಲು ಕೈ ಎತ್ತಿದ್ದರು. ಈ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿ ತೀವ್ರ ಮುಜುಗರಕ್ಕೀಡಾದ ಭರಮನಿ ರಾಜೀನಾಮೆಗೆ ಮುಂದಾಗಿದ್ದರು. ಇದರಿಂದ ವಿಪಕ್ಷಗಳು ವಾಗ್ದಾಳಿ ನಡೆಸಿದ್ದವು. ಹೀಗಾಗಿ ರಾಜ್ಯ ಸರ್ಕಾರ ಅವರ ಮನವೊಲಿಸಲು ಮುಂದಾಗಿತ್ತು. ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಕೂಡ ಈ ಸಂಬಂಧ ಭರಮನಿ ಜತೆ ಮಾತನಾಡಿದ್ದರು. ಇದೀಗ ಕೊನೆಗೂ ಭರಮನಿ ಅವರ ಮನವೊಲಿಸಿದೆ.

Leave a Reply

Your email address will not be published. Required fields are marked *

error: Content is protected !!