ಉದಯವಾಹಿನಿ, ಲಖನೌ: ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ವಿಷಪೂರಿತ ಹಾವು ಕಚ್ಚಿ ಮಹಿಳೆಯೊಬ್ಬಳು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಮಹಿಳೆ ರಾತ್ರಿ ಮಲಗಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ತಕ್ಷಣ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ್ರೂ ಆಕೆಯ ಜೀವ ಉಳಿಸಲು ಆಗಲಿಲ್ಲ. ಈ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಜನರನ್ನು ಬೆಚ್ಚಿಬೀಳಿಸಿದೆ.
ಬೌಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬ್ವಾ ತಿತಾರ್ಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸೋಫಿಯಾ (26) ಹಾವು ಕಚ್ಚಿ ಸತ್ತ ನತದೃಷ್ಟ ಮಹಿಳೆ. ಬುಧವಾರ(ಜುಲೈ 16) ರಾತ್ರಿ ಮಲಗಿದ್ದಾಗ 3 ಗಂಟೆ ಸುಮಾರಿಗೆ ಸೋಫಿಯಾ ಅವಳಿಗೆ ಮನೆಯಲ್ಲಿ ಹಾವು ಕಚ್ಚಿದೆ. ಹಾವು ಕಚ್ಚಿದ ನಂತರ ಅವಳು ಭಯ ಮತ್ತು ನೋವಿನಿಂದ ಕಿರುಚಲು ಶುರುಮಾಡಿದ್ದಾಳೆ. ಅವಳ ಕೂಗು ಕೇಳಿ ಕುಟುಂಬ ಸದಸ್ಯರು ಅವಳ ಕೋಣೆಗೆ ಓಡಿಬಂದು ನೋಡಿದಾಗ ಹಾವು ಅವಳ ದಿಂಬಿನ ಕೆಳಗೆ ಅಡಗಿರುವುದನ್ನು ಕಂಡು ಶಾಕ್ ಆಗಿದ್ದಾರೆ. ನಂತರ ಅವಳನ್ನು ಹಾವಿನ ಜೊತೆಗೆ ಬಹ್ರೈಚ್ ವೈದ್ಯಕೀಯ ಕಾಲೇಜಿಗೆ ಸೇರಿಸಿದ್ದಾರೆ. ವೈದ್ಯರು ಸೋಫಿಯಾಗೆ ಆರಂಭಿಕ ಚಿಕಿತ್ಸೆ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋಗೆ ಕಳುಹಿಸಿದ್ದಾಗ ಮಾರ್ಗಮಧ್ಯೆ ಆಕೆ ಸಾವನ್ನಪ್ಪಿದ್ದಾಳೆ. ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಮಹಿಳೆ ಹಾವು ಕಚ್ಚಿ ಸತ್ತಿದ್ದು ಇದೇ ಮೊದಲಲ್ಲ. ಇತ್ತೀಚೆಗಷ್ಟೇ ಕೈಸರ್‌ಗಂಜ್ ಪ್ರದೇಶದ ಸಖೌಟಾ ಗ್ರಾಮದ ನಿವಾಸಿ ರಮೇಶ್ ಎಂಬಾತನ ಪತ್ನಿ 40 ವರ್ಷದ ಕಲಾವತಿ ಹಾವು ಕಚ್ಚಿ ಸಾವನ್ನಪ್ಪಿದಳು.
