ಉದಯವಾಹಿನಿ, ಬೆಂಗಳೂರು: ಆರ್‌ಸಿಬಿ ಐಪಿಎಲ್ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದ ಸಂಬಂಧ ಸರ್ಕಾರ ಸಲ್ಲಿಸಿರುವ ಪ್ರಾಥಮಿಕ ತನಿಖಾ ವರದಿ ಬಹಿರಂಗಗೊಂಡಿದ್ದು, ಘಟನೆಗೆ ಆರ್‌ಸಿಬಿ ಅಸಮರ್ಪಕ ಯೋಜನೆಯೇ ಮುಖ್ಯ ಕಾರಣ ಎಂದು ಹೈಕೋರ್ಟಿಗೆ ತಿಳಿಸಲಾಗಿದೆ.
ಘಟನೆ ಸಂಬಂಧ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ್ ಅವರಿದ್ದ ವಿಭಾಗೀಯ ಪೀಠಕ್ಕೆ ಸರ್ಕಾರ ವರದಿ ಸಲ್ಲಿಸಿದೆ ವೈದ್ಯಕೀಯ ಸೌಲಭ್ಯ ಒದಗಿಸುವುದು ಕಾರ್ಯಕ್ರಮದ ಸಂಘಟಕರ ಪ್ರಾಥಮಿಕ ಕರ್ತವ್ಯ ಮತ್ತು ಜವಾಬ್ದಾರಿಯಾಗಿತ್ತು. ಆದರೆ, ಆಯೋಜಕರು ಅಗತ್ಯವಿರುವ ಮುನ್ನೆಚ್ಚರಿಕೆಗಳನ್ನು ಕೈಗೊಂಡಿರಲಿಲ್ಲ.
ವೈದ್ಯಕೀಯ ತುರ್ತು ಪರಿಸ್ಥಿತಿ ನಿಭಾಯಿಸಲು ಪ್ರಥಮ ಚಿಕಿತ್ಸಾ ವ್ಯವಸ್ಥೆಗಳನ್ನು ಮಾಡುವಲ್ಲಿ ವಿಫಲರಾಗಿದ್ದರು. ಜೊತೆಗೆ, ಕಾರ್ಯಕ್ರಮ ಆಯೋಜನೆಗೆ ಅನುಮತಿ ಕೋರಿ ಮುಂಚಿತವಾಗಿ ಮನವಿ ಸಲ್ಲಿಸಿದ್ದರೆ ವೈದ್ಯಕೀಯ ತುರ್ತು ವ್ಯವಸ್ಥೆಗಳ ಲಭ್ಯತೆ ಹಾಗೂ ಅಗತ್ಯತೆಗಳ ಬಗ್ಗೆ ಅಧಿಕಾರಿಗಳು ತಿಳಿದುಕೊಳ್ಳಬಹುದಾಗಿತ್ತು.ಆದರೆ, ಆಯೋಜಕರ ಕಾರ್ಯಕ್ರಮ ಸರಿಯಾಗಿ ಅಥವಾ ಮುಂಚಿತವಾಗಿ ನಡೆಸಲು ಪರವಾನಿಗೆಗಾಗಿ ಮನವಿ ಸಲ್ಲಿಸದ ಪರಿಣಾಮ ಈ ಎಲ್ಲ ಅಂಶಗಳನ್ನು ಪರಿಶೀಲಿಸುವುದಕ್ಕೆ ಸಾಧ್ಯವಾಗಿರಲಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.
