ಉದಯವಾಹಿನಿ, ಸ್ಟಾರ್ ನಟ ಉಪೇಂದ್ರ ಅವರ ಹಿಂದಿನ ಎರಡು ಸಿನಿಮಾಗಳಾದ ‘ಕಬ್ಜ’ ಮತ್ತು ‘ಯುಐ’ ಒಳ್ಳೆಯ ಗಳಿಕೆಯನ್ನೇ ಮಾಡಿವೆ. ಉಪೇಂದ್ರ ಅವರು ನಟಿಸಿ, ನಿರ್ದೇಶನ ಮಾಡಿದ್ದ ‘ಯುಐ’ ಸಿನಿಮಾ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಅದಾದ ಬಳಿಕ ಉಪೇಂದ್ರ ಅವರ ಯಾವ ಸಿನಿಮಾವೂ ಬಿಡುಗಡೆ ಆಗಿರಲಿಲ್ಲ. ಉಪೇಂದ್ರ ಸಾಮಾನ್ಯವಾಗಿ ಸಿನಿಮಾಗಳಿಗೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆದರೆ ಈ ಬಾರಿ ಆರು ತಿಂಗಳಿಗೂ ಹೆಚ್ಚು ಸಮಯವಾಗಿದೆ ಅವರ ಸಿನಿಮಾ ಬಿಡುಗಡೆ ಆಗಿ. ಆದರೆ ಇದೀಗ ಉಪೇಂದ್ರ ನಟನೆಯ ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗಲಿವೆ.
ಉಪೇಂದ್ರ ನಟನೆಯ ಎರಡು ದೊಡ್ಡ ಬಜೆಟ್ನ ಮತ್ತು ಬಲು ನಿರೀಕ್ಷೆ ಹುಟ್ಟಿಸಿರುವ ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗಲಿಕ್ಕಿದ್ದು, ಉಪೇಂದ್ರ ಅವರಿಗೆ ಉಪೇಂದ್ರ ಅವರೇ ಸ್ಪರ್ಧೆ ಒಡ್ಡುವಂತಾಗಿದೆ. ಉಪೇಂದ್ರ ನಟನೆಯ ‘45’ ಸಿನಿಮಾ ಹಾಗೂ ಉಪೇಂದ್ರ ನಟನೆಯ ತಮಿಳು ಪ್ಯಾನ್ ಇಂಡಿಯಾ ಸಿನಿಮಾ ‘ಕೂಲಿ’ ಒಂದೇ ದಿನ ಬಿಡುಗಡೆ ಆಗಲಿದೆ. ಈ ಎರಡೂ ಸಿನಿಮಾಗಳು ಆಗಸ್ಟ್ 15 ರಂದು ಬಿಡುಗಡೆ ಆಗಲಿದ್ದು, ಉಪೇಂದ್ರ ಅಭಿಮಾನಿಗಳು ಆಗಸ್ಟ್ 15ರ ಲಾಂಗ್ ವೀಕೆಂಡ್ನಲ್ಲಿ ತಮ್ಮ ಮೆಚ್ಚಿನ ನಟನ ಎರಡೆರಡು ಸಿನಿಮಾಗಳನ್ನು ನೋಡಬಹುದಾಗಿದೆ.
