ಉದಯವಾಹಿನಿ, ಅಂಕಾರ: ಇಸ್ರೇಲ್ ಮತ್ತು ಸಿರಿಯಾದ ನಾಯಕರು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಅಮೆರಿಕ ರಾಯಭಾರಿ ಟಾಮ್ ಬ್ಯಾರಕ್ ಶುಕ್ರವಾರ ಘೋಷಿಸಿದ್ದಾರೆ. ಇಸ್ರೇಲ್‌ನ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಮತ್ತು ಸಿರಿಯಾದ ನೂತನ ನಾಯಕ ಅಹ್ಮದ್ ಅಲ್-ಶರಾ ಈ ಒಪ್ಪಂದಕ್ಕೆ ಒಮ್ಮತ ಸೂಚಿಸಿದ್ದು, ಇದಕ್ಕೆ ಟರ್ಕಿ ಮತ್ತು ಜೋರ್ಡಾನ್‌ನ ಬೆಂಬಲವೂ ಇದೆ. ಯುದ್ಧ ಪೀಡಿತ ಸಿರಿಯಾದ ಎಲ್ಲ ಪಕ್ಷಗಳು ಶಸ್ತ್ರಾಸ್ತ್ರಗಳನ್ನು ಕೆಳಗಿಡಿ ಎಂದು ಬ್ಯಾರಕ್ ಮನವಿ ಮಾಡಿದ್ದಾರೆ.
ಹೌದು, ಇರಾನ್ ಜತೆಗಿನ ಸಂಘರ್ಷ ಮುಗಿದ ಬೆನ್ನಲ್ಲೇ, ಇಸ್ರೇಲ್ ಸಿರಿಯಾದ ಮೇಲೆ ದಾಳಿ ನಡೆಸಿತ್ತು. ಅಲ್ಲಿನ ರಾಜಧಾನಿ ಡಮಾಸ್ಕಸ್‌ನಲ್ಲಿರುವ ಅಧ್ಯಕ್ಷರ ಭವನ ಮತ್ತು ಸೇನಾ ಪ್ರಧಾನ ಕಚೇರಿ ಮೇಲೆ ವಾಯುದಾಳಿ ನಡೆಸಿ, ಸಿರಿಯಾದಲ್ಲಿರುವ ಡ್ರೂಝ್ ಸಮುದಾಯದ ರಕ್ಷಣೆಗಾಗಿ ಈ ದಾಳಿ ನಡೆಸುತ್ತಿರುವುದಾಗಿ ಇಸ್ರೇಲ್ ಹೇಳಿಕೊಂಡಿತ್ತು. ಇದು ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಿದಲ್ಲದೆ ಇಸ್ರೇಲ್ ದಾಳಿಯ ಬಗ್ಗೆ ವರದಿ ಬಿತ್ತರಿಸುತ್ತಿದ್ದ ಟಿವಿ ನಿರೂಪಕಿಯೋರ್ವಳು, ಮಾಧ್ಯಮ ಕಟ್ಟಡದ ಬಳಿ ಬಾಂಬ್ ಬಿದ್ದ ಪರಿಣಾಮ ಲೈವ್ ಕಾರ್ಯಕ್ರಮವನ್ನು ಬಿಟ್ಟು ಹೊರ ಓಡಿದ ಘಟನೆ ನಡೆದಿತ್ತು. ಆದರೀಗ ಪರಿಸ್ಥಿತಿ ತಿಳಿಯಾಗಿದ್ದು, ಕದನ ವಿರಾಮಕ್ಕೆ ಎರಡು ರಾಷ್ಟ್ರಗಳು ಒಪ್ಪಿಕೊಂಡಿವೆ.
