ಉದಯವಾಹಿನಿ, ಮಂಡ್ಯ: ಕೃತಯುಗದ ಕಾಲವದು 1000 ವರ್ಷದ ಯುದ್ಧ..! ಯಾರಿಗೆ..? ಸಂಚುಗಾರ ಮೊಸಳೆಗೆ ಹಾಗೂ ಮುಗ್ಧ ಆನೆ ಇಬ್ಬರೂ ಶಾಪಗ್ರಸ್ಥರು! ಮೊಸಳೆಯ ಬಾಯಿಗೆ ಬಿತ್ತು ಬಡಪಾಯಿ ಆನೆಯ ಕಾಲು, ನೋವು ತಡೆಯಲಾರದೇ ಆನೆ ಕೆರೆಯ ಕಮಲ ವನ್ನೆತ್ತಿ “ಪದುಮನಾಭ” ನನ್ನು ನಾರಾಯಣ ಎಂದು ಕರೆದದ್ದೇ ತಡ! ಪಕ್ಷಿವಾಹನ ಬಂದು ಮೊಸಳೆಯನ್ನು ಕೊಂದು ಆನೆಗೆ ಪುಣ್ಯದರ್ಶನದ ಮೋಕ್ಷ ನೀಡಿದ. ಇದು ಗಜೇಂದ್ರ ಮೋಕ್ಷದ ಕಥೆ! ಕಷ್ಟಕಾಲದಲ್ಲಿ ದೇವರು ನಂಬಿದವರ ಕೈ ಬಿಡೋದಿಲ್ಲ ಎಂಬುದರ ಸಾಕ್ಷಿ.
ಮೇಲುಕೊಟೆ ಚೆಲುವನಿಗೆ ಮಾರುಹೋದ ಜನ: ಕೃಷ್ಣರಾಜಮುಡಿ ಬ್ರಹ್ಮೋತ್ಸವದ ಹಿನ್ನಲೆಯಲ್ಲಿ ಪುರಾಣ ಪ್ರಸಿದ್ಧ ಮೇಲುಕೋಟೆಯಲ್ಲಿ “ಗಜೇಂದ್ರಮೋಕ್ಷ ಉತ್ಸವ” ಅತ್ಯಂತ ಸಡಗರ ಸಂಭ್ರಮದಿಂದ ನೆರವೇರಿತು. ಈ ವೇಳೆ ಕೃಷ್ಣರಾಜಮುಡಿ ಕಿರೀಟದ ಅಲಂಕಾರದಲ್ಲಿ ಚೆಲುವನಾರಾಯಣಸ್ವಾಮಿಯನ್ನ ಕಂಡ ಭಕ್ತರು ಭಕ್ತಿಯಲ್ಲಿ ಲೀನವಾದರು.
ಭಾಗವತದ ಭಕ್ತಿರಸ ಲಹರಿ ʼಗಜೇಂದ್ರ ಮೋಕ್ಷ: ಹೌದು., ಕೃಷ್ಣರಾಜಮುಡಿ ಬ್ರಹ್ಮೋತ್ಸವದ ವೇಳೆ ಗಜೇಂದ್ರಮೋಕ್ಷ ಉತ್ಸವವನ್ನ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಇದಕ್ಕೆ ಕಾರಣ ಹಿಂದೆ ಪುರಾಣದಲ್ಲಿ ಹೇಳುವ ಪ್ರಕಾರ ಆನೆಯ ಭಕ್ತಿಕೂಗಿಗೆ ಮಹಾವಿಷ್ಣು ಗರುಡಾರೂಢನಾಗಿ ಧರೆಗಿಳಿದು ಗಜೇಂದ್ರನಿಗೆ ಮೊಸಳೆಯಿಂದ ಮೋಕ್ಷ ಕರುಣಿಸಿದ ಪ್ರತೀಕವಾಗಿ “ಗಜೇಂದ್ರಮೋಕ್ಷ ಉತ್ಸವ” ಮಾಡಲಾಗುತ್ತಾ ಬಂದಿದ್ದು ಈ ಸಂದರ್ಭದಲ್ಲಿ ಚೆಲುವನಾರಾಯಣ ಸ್ವಾಮಿಯು ಗರುಡಾರೂಢವಾಗಿ ತನ್ನ ಭಕ್ತರಿಗೆ ದರ್ಶನ ನೀಡುತ್ತಾನೆ.
ಇವನ ನೋಡಿದರೆ ಸಾಕು, ಜಟಿಲ ಕಷ್ಟವೆಲ್ಲ ಮಾಯ: ಗರುಡಾರೂಢನಾದ ಚೆಲುವನಾರಾಯಣಸ್ವಾಮಿಯ ದರ್ಶನಮಾತ್ರದಿಂದಲೇ ಸಕಲ ಸಂಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ವೈರಮುಡಿ ಹಾಗೂ ಕೃಷ್ಣರಾಜಮುಡಿ ಬ್ರಹ್ಮೋತ್ಸವದ 6ನೇ ಉತ್ಸವವಾಗಿ ಗಜೇಂದ್ರಮೋಕ್ಷ ಉತ್ಸವ ನಡೆಯುತ್ತಾ ಬಂದಿದ್ದು, ಸಾವಿರಾರು ಭಕ್ತರು ಗಜೇಂದ್ರ ಮೋಕ್ಷ ಉತ್ಸವವನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ.
