ಉದಯವಾಹಿನಿ, ಅಬುಧಾಬಿ: ವರದಕ್ಷಿಣೆಗೆ 29 ವರ್ಷದ ಮಹಿಳೆಯೊಬ್ಬರು ಬಲಿಯಾದ ಮತ್ತೊಂದು ಅಮಾನುಷ ಘಟನೆ ನಡೆದಿದೆ ಕೇರಳ ಮೂಲದ ಮಹಿಳೆ ಯುಎಇಯ ಶಾರ್ಜಾದ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಗಂಡನ ಕಿರುಕುಳ ತಾಳಲಾರದೆ ಮೃತಪಟ್ಟಿದ್ದಾರೆ. ಮೃತರನ್ನು ಕೇರಳದ ಕೊಲ್ಲಂ ಮೂಲದ ಅತುಲ್ಯಾ ಶೇಖರ್ ಎಂದು ಗುರುತಿಸಲಾಗಿದೆ. 2014ರಲ್ಲಿ ಕೊಲ್ಲಂನ ಸತೀಶ್‌ನನ್ನು ವರಿಸಿದ್ದ ಅತುಲ್ಯಾ ಕೆಲವು ಸಮಯಗಳಿಂದ ಶಾರ್ಜಾದಲ್ಲಿ ನೆಲೆಸಿದ್ದರು ವರದಕ್ಷಿಣೆಗಾಗಿ ಪೀಡಿಸಿ ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಅತುಲ್ಯಾ ಪಾಲಕರು ಆರೋಪಿಸಿದ್ದಾರೆ. ಜುಲೈ 19ರಂದು ಅತುಲ್ಯಾ ಮೃತಪಟ್ಟಿದ್ದಾರೆ. ಜುಲೈ 18 ಮತ್ತು 19ರಂದು ಅತುಲ್ಯಾಳನ್ನು ಪತಿ ಸತೀಶ್ ಕತ್ತು ಹಿಸುಕಿ, ಹೊಟ್ಟೆಗೆ ಒದ್ದು, ಪ್ಲೇಟ್‌ನಿಂದು ಹೊಡೆದು ಕೊಲೆ ಮಾಡಿದ್ದಾನೆ ಎಂದು ತಾಯಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಸತೀಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಮದುವೆಯಾದಾಗಿನಿಂದ ವರದಕ್ಷಿಣೆಗಾಗಿ ಅತುಲ್ಯಾಗೆ ಕಿರುಕುಳ ನೀಡಲಾಗುತ್ತಿತ್ತು ಎಂದು ತಾಯಿ ಹೇಳಿದ್ದಾರೆ. ಮದುವೆ ವೇಳೆಯೇ ವರದಕ್ಷಿಣೆಯಾಗಿ 40 ಸವರನ್ ಚಿನ್ನ ಮತ್ತು ಬೈಕ್ ನೀಡಲಾಗಿತ್ತು. ಇಷ್ಟಕ್ಕೆ ತೃಪ್ತನಾಗದ ಸತೀಶ್ ಮತ್ತೂ ಹಣ ತರುವಂತೆ ಪೀಡಿಸುತ್ತಿದ್ದ ಎಂದು ಆರೋಪಿಸಿದ್ದಾರೆ. ಸದ್ಯ ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.
