ಉದಯವಾಹಿನಿ, ಮಂಡ್ಯ : ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲ್ಪಟ್ಟಿರುವ 86 ಜನ ಜೀತ ವಿಮುಕ್ತರಿಗೆ ಸರ್ಕಾರದ ಮಹತ್ವದ 13 ವಿವಿಧ ಗುರುತಿನ ಚೀಟಿ ಅಥವಾ ದಾಖಲೆಗಳನ್ನು ಒದಗಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಕರೆತರಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು. ಅವರು ಇಂದು ಮದ್ದೂರು ತಾಲ್ಲೂಕಿನಲ್ಲಿ ಜೀತ ವಿಮುಕ್ತ ಕುಟುಂಬದವರಿಗೆ ಗುರುತಿನ ಚೀಟಿ ಹಾಗೂ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು‌.ಜೀತ ಪದ್ಧತಿ ಕಾನೂನು ಬಾಹಿರ ಎಂದು ತಿಳಿದಿದ್ದರೂ ಸಹ‌ ಮುಗ್ದ ಜನರು ಜೀತ ಪದ್ಧತಿಗೆ ಬಲಿಯಾಗುತ್ತಾರೆ. ಜೀತ ಪದ್ಧತಿಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸರ್ಕಾರ ಹಲವಾರು ಯೋಜನೆಗಳನ್ನು ‌ರೂಪಿಸಿದೆ ಅವುಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ಜೀತ ಪದ್ಧತಿ ಕಾನೂನು‌ ಬಾಹಿರ ಎಂದು ತಿಳಿದಿದ್ದರೂ ಕೆಲವರು ಬಡತನದಿಂದ ಜೀತದಾಳಾಗಿ ಕೆಲಸ ಮಾಡುತ್ತಾರೆ. ಜಿಲ್ಲೆಯಲ್ಲಿ ಒಟ್ಟು 86 ಅವರಲ್ಲಿ ಹೆಣ್ಣು-04. ಗಂಡು-82 ಜನರನ್ನು ಜೀತ ವಿಮುಕ್ತರನ್ನಾಗಿ ಮಾಡಿ‌ ಸಮಾಜದ ಮುಖ್ಯವಾಹಿನಿಗೆ ತರಲು ಜೀತವಿಮುಕ್ತರು ಹಾಗೂ ಅವರ ಅವಲಂಬಿತರ ಬಳಿ ಸರ್ಕಾರಿ ದಾಖಲೆಗಳಿಲ್ಲದಿರುವುದು ತಿಳಿದುಬಂತು. ಎಲ್ಲಾ ಇಲಾಖೆಗಳ ಸೌಲಭ್ಯ ಪಡೆಯಲು ಕೆಲವು ದಾಖಲೆಗಳು ಅಗತ್ಯವಾಗಿ ಬೇಕಿರುವುದರಿಂದ. ಮೊದಲಿಗೆ ಜಿಲ್ಲೆಯ ಎಲ್ಲಾ ಜೀತವಿಮುಕ್ತರಿಗೂ ಸರ್ಕಾರದ ’13’ ದಾಖಲೆಗಳನ್ನು ನೀಡಲಾಗುತ್ತಿದೆ ಇದರೊಂದಿಗೆ ಅವರ ಆರೋಗ್ಯ ತಪಾಸಣೆ ಸಹ ನಡೆಸಲಾಗುತ್ತಿದೆ ಎಂದರು. ಆಧಾರ್ ಕಾಡ್೯ ಸೇರಿದಂತೆ ವಿವಿಧ ಗುರುತಿನ ಚೀಟಿ ನೀಡಲಾಗುತ್ತಿದ್ದು,ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಪಡೆದು ಇನ್ನೂ ಮುಂದೆ ಸ್ವಾವಲಂಭಿಗಳಾಗಿ ಘನತೆಯುಕ್ತ ಜೀವನ ನಡೆಸಬಹುದು ಎಂದರು.
ಮದ್ದೂರು ತಹಶೀಲ್ದಾರ್ ಕೆ.ಎಂ.ಉದಯ್ ಅವರು ಮಾತನಾಡಿ ಜೀತ ವಿಮುಕ್ತರಿಗೆ .ಆಧಾರ್ ಕಾರ್ಡ್, ಜನನ-ಮರಣ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ-ಆದಾಯ ಪ್ರಮಾಣ ಪತ್ರ, ಪಡಿತರ ಗುರುತಿನ ಚೀಟಿ, ಚುನಾವಣಾ ಗುರುತಿನ ಚೀಟಿ, ವೈಯಕ್ತಿಕ ಬ್ಯಾಂಕ್ ಉಳಿತಾಯ ಖಾತೆ, ವಿವಿಧ ಯೋಜನೆಗಳಡಿ ಪಿಂಚಣಿ, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಆರೋಗ್ಯ ವಿಮೆಗಳು (PMJJBY, PMSBY), ಇ ಶ್ರಮ್ ಗುರುತಿನ ಕಾರ್ಡ್, UDID ಗುರುತಿನ ಚೀಟಿ, ಭಾಗ್ಯಲಕ್ಷ್ಮಿ ಯೋಜನೆ, ಮನರೇಗಾ ಉದ್ಯೋಗ ಚೀಟಿ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!