ಉದಯವಾಹಿನಿ, ಬೆಂಗಳೂರು: ಪಿಎಸ್‍ಐ, ಬಿಟ್‍ಕಾಯಿನ್‍ನಂತಹ ಹಗರಣಗಳ ವಿಚಾರದಲ್ಲಿ ಹೆಚ್ಚು ಮಾತನಾಡದೇ ಇದ್ದರೆ ದುಪ್ಪಟ್ಟು ಅನುದಾನ ಕೊಡುವುದಾಗಿ ಈ ಹಿಂದಿನ ಸರ್ಕಾರದಲ್ಲಿ ಬಿಜೆಪಿಯ ಶಾಸಕರು ತಮಗೆ ಆಮಿಷವೊಡ್ಡಿದ್ದರು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗ ನಾವು ವಿರೋಧಪಕ್ಷದ ಸ್ಥಾನದಲ್ಲಿದ್ದೆವು. ಬಿಜೆಪಿ ಸರ್ಕಾರಗಳ ಹಗರಣಗಳನ್ನು ಒಂದೊಂದಾಗಿ ಬಯಲಿಗೆ ತರುತ್ತಿದ್ದೆವು. ಆ ಕಾರಣಕ್ಕೆ ನನ್ನ ಕ್ಷೇತ್ರಕ್ಕೆ ಮಂಜೂರಾಗಿದ್ದ 280 ಕೋಟಿ ರೂ. ಯೋಜನೆಗಳನ್ನು ತಡೆಹಿಡಿಯಲಾಗಿತ್ತು. ಅದಕ್ಕೆ ನಾವು ಏನೂ ಹೇಳುವುದಿಲ್ಲ. ನಮ್ಮ ಸರ್ಕಾರ ಬಂದಾಗ ನೋಡಿಕೊಳ್ಳೋಣ ಎಂದು ಸುಮ್ಮನಾಗಿದ್ದೇವೆ ಎಂದರು.

ಬಿಜೆಪಿಯ ನಾಯಕರು, ಶಾಸಕರು ತಮ್ಮ ಬಳಿ ಬಂದು ಹಗರಣಗಳನ್ನು ಬಯಲು ಮಾಡುವುದನ್ನು ನಿಲ್ಲಿಸಿ ನಿಮಗೆ ಡಬ್ಬಲ್ ಅನುದಾನ ಕೊಡಿಸುತ್ತೇವೆ ಎಂದು ಆಮಿಷವೊಡ್ಡಿದರು. ಈ ಚರ್ಚೆಗಳು ಸದನ ನಡೆಯುವಾಗಲೇ ಆಗಿತ್ತು ಎಂದು ಹೇಳಿದರು. ಆಡಳಿತ ಪಕ್ಷದ ಶಾಸಕರಿಗೆ ಒಂದಿಷ್ಟು ಹೆಚ್ಚು ಆದ್ಯತೆ ಸಿಗುವುದು ಸಹಜ. ಆದರೆ ನಮ್ಮ ಸರ್ಕಾರ ಯಾವುದೇ ಯೋಜನೆಯನ್ನು ತಾರತಮ್ಯ ಮಾಡುವುದಿಲ್ಲ. ರಾಷ್ಟ್ರೀಯ ಜಲಜೀವನ್ ಮಿಷನ್ ಯೋಜನೆ ಕಾಂಗ್ರೆಸ್ ಶಾಸಕರಿಗೆ ಮಾತ್ರ ಕೊಡುತ್ತಿದ್ದೇವೆಯೇ?, ಎಲ್ಲಾ ಪಕ್ಷದ ಕ್ಷೇತ್ರಗಳಿಗೂ ಹಂಚಿಕೆಯಾಗುತ್ತಿಲ್ಲವೇ..?, ಎತ್ತಿನಹೊಳೆ ಯೋಜನೆ ಹಾದಿಯಲ್ಲಿ ಹೆಚ್ಚಿನ ಶಾಸಕರು, ಸಂಸದರು ಇರುವುದು ಬಿಜೆಪಿಯವರು, ನಾವು ತಾರತಮ್ಯ ಮಾಡದೇ ಯೋಜನೆ ಕೈಗೊಂಡಿಲ್ಲವೇ? ಎಂದು ಪ್ರಶ್ನಿಸಿದರು.
ಕಲ್ಯಾಣಪಥ, ಪ್ರಗತಿಪಥ ಯೋಜನೆಯಲ್ಲಿ ಎಲ್ಲಾ ಕ್ಷೇತ್ರಗಳಿಗೂ ಸಮಾನವಾಗಿ ಅನುದಾನ ಹಂಚಿಕೆಯಾಗುತ್ತಿದೆ. ಬಿಜೆಪಿ ಅನಗತ್ಯವಾಗಿ ಟೀಕೆ ಮಾಡುತ್ತಿದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಅದರ ಬದಲಾಗಿ ರಾಜ್ಯದ ಅಭಿವೃದ್ಧಿಗೆ ಬಿಜೆಪಿಯ ನಾಯಕರು ಹಾಗೂ ಸಂಸದರು ಕೈಜೋಡಿಸಿ ಭದ್ರಾಮೇಲ್ದಂಡೆ ಯೋಜನೆಗೆ 5,400 ಕೋಟಿ ರೂ. ಕೊಡಿಸಲು ಪ್ರಯತ್ನಿಸಿ, ತುಂಗಾಭದ್ರಾ ಅಣೆಕಟ್ಟಿಗೆ ಬಿಜೆಪಿಯವರ ಕೊಡುಗೆಯೇನು?, ಜಲಜೀವನ್ ಮಿಷನ್ ಯೋಜನೆಯಡಿ ಹಿಂದಿನ ವರ್ಷದ ಬಾಕಿ 2,500 ಕೋಟಿ ರೂ. ಕೊಡಬೇಕು. ಇದರ ಬಗ್ಗೆ ಗಮನ ಹರಿಸಲು ಅದನ್ನು ಬಿಟ್ಟು ರಾಜಕೀಯದ ಮಾತುಗಳನ್ನಾಡಿದರೆ ಉತ್ತರ ಕೊಡಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.

Leave a Reply

Your email address will not be published. Required fields are marked *

error: Content is protected !!