ಉದಯವಾಹಿನಿ, ಬೆಂಗಳೂರು: ಸಣ್ಣಪುಟ್ಟ ವ್ಯಾಪಾರಿಗಳಿಗೆ ನೀಡಲಾಗಿರುವ ನೋಟೀಸ್‌ಗಳ ಪರಿಣಾಮ ಈಗ ಪ್ರತಿಭಟನೆಗೆ ತಿರುಗಿದೆ. ನಾಳೆ ಮತ್ತು ನಾಡಿದ್ದು ಎರಡು ದಿನಗಳ ಕಾಲ ವರ್ತಕರು ಹಾಲು ಹಾಗೂ ಅದರ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸುವ ಮೂಲಕ ರಾಜ್ಯಸರ್ಕಾರದ ವಿರುದ್ಧ ತಿರುಗಿಬೀಳಲು ಸಜ್ಜಾಗಿದ್ದಾರೆ.ಸಣ್ಣಪುಟ್ಟದಾಗಿ ಟೀ ಅಂಗಡಿಗಳು, ಹಾಲು, ಮೊಸರು ಮಾರಾಟದ ಬೂತ್‌ಗಳು, ಹೂ-ಹಣ್ಣು, ತರಕಾರಿಯಂತಹ ವ್ಯಾಪಾರ ಮಾಡುವ ವರ್ತಕರಿಗೆ ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಸುವಂತೆ ರಾಜ್ಯಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ ನೋಟೀಸ್ ಜಾರಿ ಮಾಡಿದೆ. ಇದರ ವಿರುದ್ಧ ಆಕ್ರೋಶಗೊಂಡಿರುವ ವರ್ತಕರು ಹಾಲಿನ ಉತ್ಪನ್ನಗಳನ್ನು ಬಹಿಷ್ಕರಿಸುವ ಮೂಲಕ ಎರಡು ದಿನಗಳ ಸಾಂಕೇತಿಕ ಹೋರಾಟ ನಡೆಸಲಾಗುವುದು. ಜು.25 ರಂದು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತಯಾರಿಗಳಾಗಿವೆ.ಈ ಮೂಲಕ ನೋಟೀಸ್‌ಗಳನ್ನು ಹಿಂಪಡೆಯಬೇಕು ಹಾಗೂ ತೆರಿಗೆ ವಸೂಲಿಯ ಪ್ರಯತ್ನವನ್ನು ಕೈಬಿಡಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.
ಜಿಎಸ್‌ಟಿ ಗೊಂದಲ : ಸಣ್ಣಪುಟ್ಟ ವ್ಯಾಪಾರಿಗಳಿಗೆ ನೋಟಿಸ್ ನೀಡಿರುವುದು ಭಾರೀ ಪ್ರಮಾಣದ ಚರ್ಚೆಗೆ ಗ್ರಾಸವಾಗಿದೆ.ಜೀವನೋಪಾಯಕ್ಕಾಗಿ ಬೀದಿಬದಿ ವ್ಯಾಪಾರ ಮಾಡುವ ಜನರಿಂದಲೂ ತೆರಿಗೆ ವಸೂಲಿ ಮಾಡಲು ಕ್ರಮ ಕೈಗೊಂಡಿರುವುದು ಅಸಮಂಜಸ. ರಾಜ್ಯಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದು, ಸಂಪನೂಲ ಕ್ರೋಢೀಕರಣಕ್ಕಾಗಿ ಸಣ್ಣಪುಟ್ಟ ವ್ಯಾಪಾರಿಗಳ ಮೇಲೆ ಮುಗಿಬಿದ್ದಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
