ಉದಯವಾಹಿನಿ, ಧಾರವಾಡ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳ ಮೇಲಾಯ್ತು. ಇದುವರೆಗೂ ರಾಜ್ಯದ ಜನತೆಗೆ ಈ ಸರ್ಕಾರ ಒಂದು ಕೆಜಿ ಅಕ್ಕಿಯನ್ನೂ ಕೊಟ್ಟಿಲ್ಲ. ಈಗ ಕೊಡುತ್ತಿರುವ ಐದು ಕೆಜಿ ಅಕ್ಕಿ ಕೇಂದ್ರದ್ದು. ಕೇಂದ್ರ ಕೊಡುವ 5 ಕೆಜಿ ಅಕ್ಕಿ ಬಿಟ್ಟು 10 ಕೆಜಿ ಅಕ್ಕಿಯನ್ನು ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ನೀಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಒತ್ತಾಯಿಸಿದ್ದಾರೆ. ನಗರದಲ್ಲಿ ತನಾಡಿದ ಅವರು, ಕೇಂದ್ರ ಸರ್ಕಾರ 5 ಕೆಜಿ ಅಕ್ಕಿಯನ್ನು ಈಗ ನ್ಯಾಷನಲ್ ಫುಡ್ ಸೆಕ್ಯುರಿಟಿ ಆ್ಯಕ್ಟ್ ಅಡಿಯಲ್ಲಿ ಕೊಡುತ್ತಿದೆ. ಈ ಆ್ಯಕ್ಟ್ ಮಾಡಿದ್ದು ನಾವು ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಅವರು ಆ್ಯಕ್ಟ್ ಪಾಸ್ ಮಾಡಿದ್ದರೂ ಅದಕ್ಕೆ ಹಣ ಇಟ್ಟಿರಲಿಲ್ಲ.
ಮೋದಿಯವರು ಬಂದ ನಂತರ ಇದನ್ನು ನಾವು ಆರಂಭ ಮಾಡಿದ್ದೇವೆ. ಇದು ಕೇಂದ್ರ ಸರ್ಕಾರದ ಜವಾಬ್ದಾರಿ. ಈಗ ಮೋದಿಯವರು ಕೊಡುತ್ತಿರುವ 5 ಕೆಜಿ ಅಕ್ಕಿ ಬಿಟ್ಟು ರಾಜ್ಯ ಸರ್ಕಾರ 10 ಕೆಜಿ ಅಕ್ಕಿ ಕೊಡಲಿ. ಇದನ್ನು ಕೇಂದ್ರ ಸರ್ಕಾರದ ಮೇಲೆ ಕ್ಷುಲ್ಲಕ ಆರೋಪ ಮಾಡುವುದು ಸರಿಯಲ್ಲ ಎಂದರು. ಎಲ್ಲ ರಾಜ್ಯಗಳು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಘೋಷಣೆ ಮಾಡಿದರೆ ಮುಂದೇನು? ಎಲ್ಲರಿಗೂ ಕೇಂದ್ರ ಅಕ್ಕಿ ಕೊಡಲು ಆಗುತ್ತಾ? ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲೂ ಹೆಚ್ಚುವರಿ ಅಕ್ಕಿಯನ್ನು ನಾವು ಕೊಟ್ಟಿಲ್ಲ. ಹೆಚ್ಚುವರಿ ಅಕ್ಕಿಯನ್ನು ಆಯಾ ರಾಜ್ಯಗಳು ವ್ಯವಸ್ಥೆ ಮಾಡಿಕೊಳ್ಳುತ್ತಿವೆ ಎಂದರು. ಜಗದೀಶ ಶೆಟ್ಟರ್‌ಗೆ ವಿಧಾನ ಪರಿಷತ್ ಟಿಕೆಟ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ನವರಿಗೆ ಸಂಖ್ಯಾ ಬಲವಿದೆ. ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿದೆ. ಅವರಿಗೆ ಒಳ್ಳೆಯದಾಗಲಿ ಎಂದರು.
