ಉದಯವಾಹಿನಿ, ಕೊಲಂಬೊ: ಮಧ್ಯಪ್ರಾಚ್ಯ ಯುದ್ಧದಿಂದ ಉಂಟಾಗಿರುವ ತೈಲ ಬಿಕ್ಕಟ್ಟಿಗೆ ಶ್ರೀಲಂಕಾ ತತ್ತರಿಸಿದೆ. ತೈಲ ಉಳಿಸುವುದಕ್ಕಾಗಿ ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ, ಬುಧವಾರ ರಜೆ ದಿನವಾಗಿ ಘೋಷಿಸಿ ಆದೇಶ ಹೊರಡಿಸಿದೆ.
ಶ್ರೀಲಂಕಾ ಸರ್ಕಾರವು ಸಾರ್ವಜನಿಕ ಸಂಸ್ಥೆಗಳಿಗೆ ಪ್ರತಿ ವಾರ ಒಂದು ಹೆಚ್ಚುವರಿ ರಜಾ ದಿನವನ್ನು ಘೋಷಿಸಿದೆ. ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಇರಲಿದೆ. ಮಾ.18 ರಿಂದ ಶನಿವಾರ, ಭಾನುವಾರದಂತೆಯೇ ಬುಧವಾರವೂ ಸಾರ್ವಜನಿಕ ರಜಾ ದಿನ ಎಂದು ಸರ್ಕಾರ ಘೋಷಿಸಿದೆ.

ನಾವು ಕೆಟ್ಟ ಪರಿಸ್ಥಿತಿ ಎದುರಿಸಲು ಸಿದ್ಧರಾಗಬೇಕು. ಆದರೆ, ಉತ್ತಮವಾದದ್ದಕ್ಕಾಗಿ ಆಶಿಸಬೇಕು ಎಂದು ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಸೋಮವಾರ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆಯಲ್ಲಿ ಮಾತನಾಡಿದ್ದಾರೆ.ವಾರದಲ್ಲಿ ನಾಲ್ಕು ದಿನಗಳ ಕೆಲಸ ನಿಯಮವು ಶಾಲೆಗಳು, ವಿಶ್ವವಿದ್ಯಾಲಯ ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೂ ಅನ್ವಯಿಸಲಿದೆ. ಆದರೆ, ಆರೋಗ್ಯ ಸೇವೆ, ಬಂದರು, ತುರ್ತು ಕಾರ್ಯಾಚರಣೆಗಳಂತಹ ಅಗತ್ಯ ಸೇವೆಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.

ಸರ್ಕಾರಿ ಕಚೇರಿಗಳು ಸತತ ಮೂರು ದಿನಗಳವರೆಗೆ ಮುಚ್ಚದಂತೆ ಅಧಿಕಾರಿಗಳು ಬುಧವಾರವನ್ನು ಹೆಚ್ಚುವರಿ ರಜೆ ದಿನವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ಇಂಧನ ಪಾಸ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ವಾಹನ ಚಾಲಕರು ನೋಂದಾಯಿಸಿಕೊಳ್ಳುವುದು ಮತ್ತು ಖರೀದಿಗೆ ಸೀಮಿತ ಪ್ರಮಾಣದ ಇಂಧನವನ್ನು ಹಂಚಿಕೆ ಮಾಡುವುದು ಕಡ್ಡಾಯವಾಗಿದೆ.

Leave a Reply

Your email address will not be published. Required fields are marked *

error: Content is protected !!