ಉದಯವಾಹಿನಿ, ಬೆಂಗಳೂರು: ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ರಾಜೀನಾಮೆ ವಿಷಯ ಭಾರೀ ವಿವಾದಕ್ಕೀಡಾಗಿದೆ. ಅನಾರೋಗ್ಯ ನೆಪವೊಡ್ಡಿ ರಾಜೀನಾಮೆ ನೀಡಿರುವುದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್ ಪಾಟೀಲ್ ತಿಳಿಸಿದ್ದಾರೆ.  ಬೆಂಗಳೂರಿನಲ್ಲಿ ಮಾತನಾಡಿದ ಅವರು, ಉಪರಾಷ್ಟ್ರಪತಿ ಅನಿರೀಕ್ಷಿತ ರಾಜೀನಾಮೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಬಿಜೆಪಿ (BJP) ಆರೋಗ್ಯ ಚೆನ್ನಾಗಿಲ್ಲದಿರುವುದೇ ಇದಕ್ಕೆ ಕಾರಣ. ಬಿಜೆಪಿಯಲ್ಲಿರುವ ಸರ್ವಾಧಿಕಾರ ಧೋರಣೆಯೇ ಜಗದೀಪ್ ಧನಕರ್ ಅವರ ರಾಜೀನಾಮೆಗೆ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದರು.

ಇಡೀ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದರೆ ಬಿಜೆಪಿಯಲ್ಲಿ ಏನೋ ಸರಿಯಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇಡೀ ಪಕ್ಷ ಇಬ್ಬರ ಕೈಯಲ್ಲಿದೆ. ಸರ್ವಾಧಿಕಾರ ಹೆಚ್ಚಾಗಿರುವುದರಿಂದ ಬೇರೆ ಯಾವ ನಾಯಕರೂ ಮಾತನಾಡದೇ ಸುಮ್ಮನಿದ್ದಾರೆ. ಜನರಿಗೆ ಇದು ಗೊತ್ತಾಗುವುದಿಲ್ಲ ಎಂದು ಬಿಜೆಪಿಯವರು ತಿಳಿದುಕೊಂಡಿದ್ದಾರೆ. ಆದರೆ ಇಡೀ ಪ್ರಕರಣದಿಂದ ಬಿಜೆಪಿಯ ಬಣ್ಣ ಸಂಪೂರ್ಣ ಬಯಲಾಗಿದೆ ಎಂದು ದೂರಿದರು. ಬಿಜೆಪಿಯಲ್ಲಿ ಪ್ರಜಾಪ್ರಭುತ್ವ, ನೀತಿ-ನಿಯಮಗಳು ಇಲ್ಲ. ಕೇಂದ್ರ ಸರ್ಕಾರ ಕೂಡ ಸಂವಿಧಾನ ಪಾಲನೆ ಮಾಡುತ್ತಿಲ್ಲ. ಸರ್ಕಾರವನ್ನು ಮುನ್ನಡೆಸುತ್ತಿರುವವರು ಇದುವರೆಗೂ ಒಂದಾದರೂ ಸುದ್ದಿಗೋಷ್ಠಿ ಮಾಡಿದ್ದಾರಾ? ಏಕಪಕ್ಷೀಯ ನಿರ್ಧಾರಗಳೇ ಹೆಚ್ಚಾಗಿ ತೆಗೆದುಕೊಳ್ಳಲಾಗುತ್ತದೆ. ಇಂಥ ಅಪಸವ್ಯಗಳಿಂದಲೇ ಬಿಜೆಪಿಯಲ್ಲಿ ಅನಾರೋಗ್ಯ ಪರಿಸ್ಥಿತಿ ಇದೆ ಎಂದು ಟೀಕಿಸಿದರು. 

Leave a Reply

Your email address will not be published. Required fields are marked *

error: Content is protected !!