ಉದಯವಾಹಿನಿ, ಇಸ್ಲಾಮಾಬಾದ್: 2001ರ ಭಾರತೀಯ ಸಂಸತ್ ಭವನದ ಮೇಲಿನ ದಾಳಿಯ ಸಂಚುಕೋರ ಹಾಗೂ 26/11ರ ಮುಂಬೈ ಉಗ್ರರ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಷ್ಕರ್-ಎ-ತೈಬಾದ ಪ್ರಮುಖ ಉಗ್ರ ಅಬ್ದುಲ್ ಅಜೀಜ್ ಪಾಕಿಸ್ತಾನದ ಬಹಾವಲ್ಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.ಅಬ್ದುಲ್ ಅಜೀಜ್ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಪ್ರಮುಖ ಹಣಕಾಸು ಕಾರ್ಯಾಚರಣಾ ಮತ್ತು ಕಾರ್ಯತಂತ್ರದ ಮಾಡ್ಯೂಲ್ ಸಂಯೋಜಕರಾಗಿದ್ದ. ಕಳೆದ ಮೇ 7 ರಂದು ಭಾರತದ ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಕ್ಷಿಪಣಿ ದಾಳಿಗೆ ತುತ್ತಾಗಿ ಗಾಯಗೊಂಡಿದ್ದ ಎನ್ನಲಾಗಿದೆ.
ಲಷ್ಕರ್-ಇ-ತೈಬಾದ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿಯೊಂದಿಗೆ ಅಜೀಜ್ ನಿಕಟ ಸಂಬಂಧ ಹೊಂದಿದ್ದ. ಅಬ್ದುಲ್ ಅಜೀಜ್ ಅಂತ್ಯಕ್ರಿಯೆಯಲ್ಲಿ ಸೈಫುಲ್ಲಾ ಕಸೂರಿ ಮತ್ತು ಅಬ್ದುರ್ ರೌಫ್ ಅವರಂತಹ ಹಿರಿಯ ಲಷ್ಕರ್ ನಾಯಕರು ಭಾಗಿಯಾಗಿದ್ದಾರೆ.ಲಷ್ಕರ್ ಸಂಘಟನೆಯ ಮುಖ್ಯ ಕೊಂಡಿ: ಅಜೀಜ್ ಲಷ್ಕರ್ ಸಂಘಟನೆಗೆ ಪ್ರಮುಖ ಆರ್ಥಿಕ ಕೊಂಡಿಯಾಗಿದ್ದ. ಗಲ್ಫ್ ರಾಷ್ಟ್ರಗಳು, ಬ್ರಿಟನ್ ಮತ್ತು ಅಮೆರಿಕದಲ್ಲಿರುವ ಪಾಕಿಸ್ತಾನಿ ಸಮುದಾಯಗಳು ಮತ್ತು ಮೂಲಭೂತ ಇಸ್ಲಾಮಿಸ್ಟ್ ಗುಂಪುಗಳಿಂದ ಹಣ ಸಂಗ್ರಹಿಸುತ್ತಿದ್ದ. ಹಣಕಾಸಿನ ಹೊರತಾಗಿ, ಅಜೀಜ್ ಲಾಜಿಸ್ಟಿಕ್ಸ್, ಶಸ್ತ್ರಾಸ್ತ್ರ ಪೂರೈಕೆ ಮತ್ತು ವಿವಿಧ ಭಯೋತ್ಪಾದಕ ಚಟುವಟಿಕೆಗಳಿಗೆ ನೇಮಕಾತಿಯನ್ನೂ ನಿರ್ವಹಿಸುತ್ತಿದ್ದ.
