ಉದಯವಾಹಿನಿ, ನವದೆಹಲಿ: ಹಲವಾರು ಸೈಬರ್ ವಂಚನೆ ಪ್ರಕರಣಗಳನ್ನು ಭೇದಿಸಲು ಸಹಾಯ ಮಾಡಿದ ದೆಹಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು 2 ಕೋಟಿ ರೂಪಾಯಿಗಳನ್ನು ಕದ್ದು ತನ್ನ ಸಬ್ ಇನ್ಸ್‌ಪೆಕ್ಟರ್ ಗೆಳತಿಯೊಂದಿಗೆ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಕದ್ದ ಹಣವನ್ನು ಗೋವಾ, ಮನಾಲಿ ಮತ್ತು ಜಮ್ಮು ಮತ್ತು ಕಾಶ್ಮೀರ ಹೀಗೆ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಹಾಗೂ ಮಜಾ ಮಾಡಲು ಬಳಸುತ್ತಿದ್ದರು ಎಂದು ವರದಿಯಾಗಿದೆ.
ಉತ್ತರ-ಪೂರ್ವ ಜಿಲ್ಲೆಯ ಸೈಬರ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಅಂಕುರ್ ಮಲಿಕ್, ನಕಲಿ ದೂರುದಾರರ ಹೆಸರಿನಲ್ಲಿ ಕೋರ್ಟ್ ಆದೇಶ ಪಡೆದು ಕಳವು ಮಾಡಿದ ಹಣವನ್ನು ತನ್ನ ಪರಿಚಿತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾನೆ. 2021ರ ಬ್ಯಾಚ್‌ನ ಅಧಿಕಾರಿಯಾದ ಮಲಿಕ್, ಏಳು ದಿನಗಳ ವೈದ್ಯಕೀಯ ರಜೆಯ ಮೇಲೆ ತೆರಳಿದ್ದವರು ಕರ್ತವ್ಯಕ್ಕೆ ಮರಳಿರಲಿಲ್ಲ. ಅದೇ ಸಮಯದಲ್ಲಿ, ಅದೇ ಬ್ಯಾಚ್‌ನ ಜಿಟಿಬಿ ಎನ್‌ಕ್ಲೇವ್ ಠಾಣೆಯ ಸಬ್-ಇನ್ಸ್‌ಪೆಕ್ಟರ್ ನೇಹಾ ಪೂನಿಯಾ ಕೂಡ ಕಾಣೆಯಾಗಿದ್ದಾರೆ. ಕಾಣೆಯಾದ ವರದಿಯ ಬಳಿಕ, ತನಿಖೆಯಲ್ಲಿ ಮಲಿಕ್ ಸೈಬರ್ ಪ್ರಕರಣಗಳಿಂದ ವಸೂಲಾದ ಕೋಟಿಗಟ್ಟಲೆ ಹಣವನ್ನು ಕಳವು ಮಾಡಿದ್ದು, ಪೂನಿಯಾ ಅವರೊಂದಿಗೆ ವಿವಾಹೇತರ ಸಂಬಂಧದಲ್ಲಿದ್ದರು ಎಂದು ಬಯಲಾಗಿದೆ. ಇಬ್ಬರೂ ವಿವಾಹಿತರಾಗಿದ್ದು, ಮಲಿಕ್‌ನ ಪತ್ನಿ ಉತ್ತರ ಪ್ರದೇಶದ ಬರೌತ್‌ನಲ್ಲಿದ್ದರೆ, ಪೂನಿಯಾಳ ಪತಿ ದೆಹಲಿಯ ರೋಹಿಣಿಯಲ್ಲಿದ್ದಾರೆ.
