ಉದಯವಾಹಿನಿ, ಅಡಿಲೇಡ್: ಭಾರತೀಯ ವಿದ್ಯಾರ್ಥಿ ಮೇಲೆ ಜನಾಂಗೀಯ ಪ್ರೇರಿತವಾಗಿ ದಾಳಿ ನಡೆಸಲಾಗಿದ್ದು, ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ನಡೆದಿದೆ. ಗಾಯಗೊಂಡಿರುವ ಭಾರತೀಯ ವಿದ್ಯಾರ್ಥಿ ಚರಣ್‌ಪ್ರೀತ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದಕ್ಷಿಣ ಆಸ್ಟ್ರೇಲಿಯಾ ಪೊಲೀಸರು ತಿಳಿಸಿದ್ದಾರೆ. ಈ ಘಟನೆ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಅನೇಕರು ಹೊರದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಜುಲೈ 19ರಂದು ರಾತ್ರಿ 9.22ರ ಸುಮಾರಿಗೆ ಕಿಂಟೋರ್ ಅವೆನ್ಯೂ ಬಳಿ 23 ವರ್ಷದ ಭಾರತೀಯ ವಿದ್ಯಾರ್ಥಿ ಚರಣ್‌ಪ್ರೀತ್ ಸಿಂಗ್ ತಮ್ಮ ಪತ್ನಿಯೊಂದಿಗೆ ನಗರದ ಬೆಳಕಿನ ಪ್ರದರ್ಶನಗಳನ್ನು ನೋಡಲು ಮನೆಯಿಂದ ಹೊರಗೆ ಹೋಗಿದ್ದರು. ದಂಪತಿ ಕಾರನ್ನು ನಿಲ್ಲಿಸಿದ್ದಾಗ ಐದು ಮಂದಿ ಅವರ ಕಾರಿನ ಬಳಿ ಬಂದು ದಾಳಿ ನಡೆಸಿದ್ದಾರೆ. ಲೋಹದ ಚೈನ್, ಚೂಪಾದ ವಸ್ತುಗಳಿಂದ ಅವರ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
