ಉದಯವಾಹಿನಿ, ಭೋಪಾಲ್: ಅದೃಷ್ಟ ಕೈ ಹಿಡಿದರೆ ಕಡು ಬಡವನೂ ಶ್ರೀಮಂತನಾಗುತ್ತಾನೆ ಎನ್ನುವ ಮಾತಿಗೆ ಈ ಘಟನೆಯೇ ಉತ್ತಮ ಉದಾಹರಣೆ. ಕಾರ್ಮಿಕ ದಂಪತಿಗೆ ಬೆಲೆ ಬಾಳುವ 8 ವಜ್ರ ಲಭಿಸಿದ್ದು, ಆ ಮೂಲಕ ಲಕ್ಷಾಧಿಪತಿಯಾಗಿ ಬದಲಾಗಿದ್ದಾರೆ ಮಧ್ಯ ಪ್ರದೇಶದ ಛತರ್‌ಪುರ್ ಜಿಲ್ಲೆಯ ಚಿಕ್ಕ ಗ್ರಾಮವೊಂದರ ಹರ್‌ಗೋವಿಂದ್ ಯಾದವ್ ಮತ್ತು ಪವನ್ ದೇವಿ ಯಾದವ್ ಅವರಿಗೆ ಈ ಅದೃಷ್ಟ ಒಲಿದಿದೆ. ಹಾಗಂತ ಇದು ಒಂದೇ ದಿನದಲ್ಲಿ ಒಲಿದ ಸಂಪತ್ತಲ್ಲ. ಇವರು ಸತತ 5 ವರ್ಷಗಳಿಂದ ಪನ್ನಾದ ವಜ್ರದ ಗಣಿಯಲ್ಲಿ ಹುಡುಕಾಟ ನಡೆಸುತ್ತಲೇ ಬಂದಿದ್ದರು. ಕೊನೆಗೂ ಅವರ ಶ್ರಮಕ್ಕೆ ಫಲ ದೊರೆತಿದೆ.
ಕಳೆದ 5 ವರ್ಷಗಳಿಂದ ಹರ್‌ಗೋವಿಂದ್ ಯಾದವ್ ಮತ್ತು ಅವರ ಪತ್ನಿ ಪವನ್ ದೇವಿ ಯಾದವ್ ಗಣಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ 8 ವಜ್ರ ಪತ್ತೆಯಾಗಿದ್ದು, ಈ ಪೈಕಿ ಕೆಲವು ಉತ್ಕೃಷ್ಟ ಗುಣಮಟ್ಟದ್ದಾದರೆ ಇನ್ನು ಕೆಲವು ಕಡಿಮೆ ಗುಣಮಟ್ಟ ಹೊಂದಿವೆ ಎಂದು ಮೂಲಗಳು ತಿಳಿಸಿದೆ.
