ಉದಯವಾಹಿನಿ, ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ಇಂದು ಕೂಡ ಗದ್ದಲ, ಪ್ರತಿಭಟನೆಯಲ್ಲಿ ಕಳೆದಿದ್ದು, ಮಧ್ಯಾಹ್ನ 2ರವರೆಗೆ ಸದನವನ್ನು ಮುಂದೂಡಲಾಗಿದೆ. ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ವಿಪಕ್ಷಗಳು ಚರ್ಚೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದವು.
ರಾಜ್ಯಸಭೆಯ ಸದನ ಆರಂಭವಾಗುತ್ತಿದ್ದಂತೆ ವಿಪಕ್ಷಗಳು ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಎಸ್‌ಐಆರ್ ಪ್ರಕ್ರಿಯೆ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದವು. ಲೋಕಸಭೆಯಲ್ಲೂ ಕೂಡ ಕಲಾಪ ಆರಂಭವಾದ ಕೆಲವೇ ಹೊತ್ತಿನಲ್ಲಿ ಈ ಕುರಿತು ಘೋಷಣೆಗಳು ಕೇಳಿ ಬಂದವು. ಈ ಗದ್ದಲ ಮತ್ತು ಗಲಾಟೆಯ ನಡುವೆಯೇ ಕೇಂದ್ರ ಕ್ರೀಡಾ ಸಚಿವ ಮನ್ಸುಖ್​ ಮಂಡೋವಿಯಾ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ 2025ನ್ನು ಲೋಸಭೆಯಲ್ಲಿ ಮಂಡಿಸಿದರು.
ಸದನ ಆರಂಭವಾದ ಕೆಲವೇ ಹೊತ್ತಿನಲ್ಲಿ ಕಲಾಪದಲ್ಲಿ ಪ್ರತಿಪಕ್ಷಗಳು ಗದ್ದಲವನ್ನುಂಟು ಮಾಡಿದ್ದರಿಂದ ಸದನವನ್ನು ಮುಂದೂಡಲಾಯಿತು. ಮತ್ತೆ ಸದನ ಆರಂಭವಾದ ಬಳಿಕ ಈ ಪ್ರತಿಭಟನೆಗಳು ಜೋರಾದ ಹಿನ್ನೆಲೆಯಲ್ಲಿ ಮಧ್ಯಾಹ್ನದವರೆಗೆ ಕಲಾಪಗಳನ್ನು ಮುಂದೂಡಲಾಗಿದೆ.
ಪ್ರತಿಭಟನೆಯಲ್ಲಿ ವಿಪಕ್ಷ ಸದಸ್ಯರು ಫಲಕಗಳನ್ನು ಹಿಡಿದ್ದು ಪ್ರತಿಭಟನೆಗೆ ಮುಂದಾದರು. ಇದಕ್ಕೆ ಸ್ಪೀಕರ್​ ಆಕ್ಷೇಪ ವ್ಯಕ್ತಪಡಿಸಿದರು. ದೇಶ ನಿಮ್ಮ ನಡುವಳಿಕೆಯನ್ನು ನೋಡುತ್ತಿದೆ. ಬ್ಯಾನರ್​ಗಳನ್ನು ಸದನದೊಳಗೆ ತಂದರೆ ನಾನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದು ಚರ್ಚೆಗಳು ನಡೆಯುವ ಸದನವಾಗಿದ್ದು, ಘೋಷಣೆ, ಬ್ಯಾನರ್​ಗಳಿಗೆ ಅವಕಾಶವಿಲ್ಲ. ಸದನದ ಗಂಭೀರತೆ ಕಾಪಾಡಬೇಕು ಎಂದು ಹೇಳಿ ಲೋಕಸಭಾ ಸ್ಪೀಕರ್​ ಓಂ ಪ್ರಕಾಶ್​ ಬಿರ್ಲಾ ಸದಸ್ಯರಿಗೆ ವಾರ್ನಿಂಗ್ ಕೊಟ್ಟರು.
ಈ ವೇಳೆ, ಅನೇಕ ವಿಪಕ್ಷ ನಾಯಕರು, ಸಾರ್ವಜನಿಕ ಪ್ರಾಮುಖ್ಯತೆಯ ವಿವಿಧ ವಿಷಯಗಳನ್ನು ಚರ್ಚಿಸಲು ನಿಲುವಳಿ ಸೂಚನೆಗಳನ್ನು ಮಂಡಿಸಿದರು. ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ​, ಪಹಲ್ಗಾಮ್ ಭಯೋತ್ಪಾದಕ ದಾಳಿ ಸೇರಿದಂತೆ ನಿರ್ಣಾಯಕ ವಿಷಯಗಳ ಕುರಿತು ಪ್ರಧಾನಿಯವರು ಉಭಯ ಸದನಗಳು ಮತ್ತು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಬೇಕೆಂದು ವಿರೋಧ ಪಕ್ಷದ ನಾಯಕರು ಒತ್ತಾಯಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!