ಉದಯವಾಹಿನಿ, ಮೈಸೂರು: ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ ಕೊಟ್ಟಿರುವುದನ್ನು ಖಂಡಿಸಿ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕರ್ನಾಟಕ ಸೇನಾ ಪಡೆಯಿಂದ ಇಂದು ಪ್ರತಿಭಟನೆ ನಡೆಯಿತು. ರಾಜ್ಯದ ಬೊಕ್ಕಸ ತುಂಬಿಸಿಕೊಳ್ಳಲು ಜಿಎಸ್‌ಟಿ ವ್ಯಾಪ್ತಿಗೆ ಒಳಪಡದ ಸಣ್ಣ ವ್ಯಾಪಾರಿಗಳ (ಬೇಕರಿ, ಕಾಂಡಿಮೆಂಟ್ಸ್ ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ) ನೆಮ್ಮದಿ ಕೆಡಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮಕ್ಕೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಣ್ಣ ವ್ಯಾಪಾರಿಗಳಿಗೆ ರಾತ್ರೋರಾತ್ರಿ ಲಕ್ಷಾಂತರ ರೂ. ಜಿಎಸ್‌ಟಿ ಪಾವತಿಸುವಂತೆ ರಾಜ್ಯ ಸರ್ಕಾರ ನೋಟಿಸ್ ನೀಡಿರುವುದು ಅತ್ಯಂತ ಖಂಡನೀಯ. ಜಿಎಸ್‌ಟಿ ಹೆಸರಿನಲ್ಲಿ ಹೆಚ್ಚು ತೆರಿಗೆ ವಿಧಿಸುವ ಮೂಲಕ ಸಂಕಷ್ಟಕ್ಕೆ ತಳ್ಳುತ್ತಿದೆ. ಹಾಲು, ಹೂ, ಹಣ್ಣು, ತರಕಾರಿ ವ್ಯಾಪಾರಿಗಳು ಇಂದು ಬಂಡವಾಳ ಹಾಕಿದರೆ ನಾಳೆ 500ರಿಂದ 1000 ರೂಪಾಯಿ ಲಾಭ ಬರುತ್ತದೆ. ಮೊದಲು ಟ್ಯಾಕ್ಸ್ ಎನ್ನುವುದು ಶ್ರೀಮಂತರ ಮೇಲಿತ್ತು. ಈಗ ದಿನಗೂಲಿ ವ್ಯಾಪಾರಿಗಳ ಮೇಲೂ ಹೊರಿಸುತ್ತಿರುವುದರಿಂದ ಸಣ್ಣ ವ್ಯಾಪಾರಿಗಳು ಜೀವನ ನಡೆಸುವುದೇ ಕಷ್ಟಕರವಾಗಿದೆ ಎಂದು ಕಿಡಿಕಾರಿದರು. ಯುಪಿಐ ಆಧಾರಿತ ವಹಿವಾಟುಗಳ ಮೇಲೆ ಜಿಎಸ್‌ಟಿ ವಿಧಿಸುವ ವಿಚಾರ ರಾಜ್ಯದಲ್ಲಿ ಗೊಂದಲದ ಗೂಡಾಗಿದೆ. ಈ ವಿಚಾರವಾಗಿ ವಿರೋಧ ವ್ಯಕ್ತಪಡಿಸಿರುವ ಸಣ್ಣ ವ್ಯಾಪಾರಿಗಳು ಜುಲೈ 23ರಿಂದ 25ರ ವರೆಗೆ ವ್ಯಾಪಾರ ವಹಿವಾಟು ಬಂದ್ಗೆ ಕರೆ ನೀಡಿರುವುದು ಅತ್ಯಂತ ನೋವಿನ ಸಂಗತಿ. ಇದರಿಂದ ಸಣ್ಣ ವ್ಯಾಪಾರಿಗಳು ಯುಪಿಐ ವಹಿವಾಟಿನ ಸ್ಕ್ಯಾನರ್ ತೆಗೆದು ಹರಿದು ಹಾಕಿ, ನಗದು ಪಾವತಿಗೆ ಆದ್ಯತೆ ನೀಡುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
