ಉದಯವಾಹಿನಿ, ಬೆಂಗಳೂರು: ರಾಜ್ಯ ಸರ್ಕಾರದಿಂದ ಶಕ್ತಿ ಯೋಜನೆಯ ಅಡಿಯಲ್ಲಿ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಮಹಿಳೆಯರಿಗೆ ಅವಕಾಶ ನೀಡಲಾಗಿತ್ತು. ಜೂನ್.11ರಿಂದ ಆರಂಭಗೊಂಡ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಈ ಹಿನ್ನಲೆಯಲ್ಲಿ ಮಹಿಳೆಯರಿಗೆ ವಿಶೇಷ ಜಾತ್ರೆ, ಹಬ್ಬ, ಜನಸಂದಣಿ ಹೆಚ್ಚಿರುವಂತ ಸ್ಥಳಗಳಲ್ಲಿ ಹೆಚ್ಚುವರಿ ಬಸ್ಸುಗಳನ್ನು ನಿಯೋಜಿಸಲು ಕ್ರಮ ವಹಿಸಿದೆ. ಈ ಮೂಲಕ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಇಂದು ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರ ಸೂಚನೆಯಂತೆ, ನಿಗಮದ ವ್ಯವಸ್ಥಾಪಕ ನಿರ್ದೇಶಕರವರಾದ ವಿ. ಅನ್ಬುಕುಮಾರ್ ಅವರು ನಿಗಮದ ಎಲ್ಲಾ 16 ವಿಭಾಗಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಿಭಾಗೀಯ ಸಂಚಾರ ಅಧಿಕಾರಿಗಳು ಹಾಗೂ 83 ಘಟಕ ವ್ಯವಸ್ಥಾಪಕರುಗಳೊಂದಿಗೆ ಶಕ್ತಿ ಯೋಜನೆಗೆ ಸಂಬಂಧಪಟ್ಟಂತೆ ವಿಡಿಯೋ ಸಂವಾದ ನಡೆಸಿದರು.
ಕರ್ನಾಟಕ ಸರ್ಕಾರವು ಜಾರಿಗೊಳಿಸಿರುವ ಮಹತ್ವದ ಶಕ್ತಿ ಯೋಜನೆಯನ್ನು ಇನ್ನಷ್ಟು ಸುಗಮವಾಗಿ ನಡೆಸುವ ಸಂಬಂಧ ಹಾಗೂ ಈಗಾಗಲೇ ಕೈಗೊಂಡಿರುವ ಕ್ರಮಗಳ ಬಗ್ಗೆ ಕೂಲಂಕುಷ ಚರ್ಚೆ ನಡೆಸಿದರು. ಸಾರಿಗೆ ಹಾಗೂ ಮುಜರಾಯಿ ಸಚಿವರು ಸೂಚಿಸಿರುವಂತೆ, ಸರ್ಕಾರದ ಮಹತ್ವಕಾಂಕ್ಷೆಯ ಶಕ್ತಿ ಯೋಜನೆಯನ್ನು ವ್ಯವಸ್ಥಿತ ವಾಗಿ ನಡೆಸಲು, ವಿಭಾಗಗಳ ವ್ಯಾಪ್ತಿಯಲ್ಲಿ ಜನಸಂದಣಿ ಹೆಚ್ಚಿರುವ 10 ಸ್ಥಳಗಳನ್ನು, ವಿಶೇಷ ಜಾತ್ರೆ/ ಹಬ್ಬ ವಿರುವ ದಿನಗಳನ್ನು ಗುರುತಿಸಿ, ಪ್ರಯಾಣಿಕರ ಸಂದಣಿ ಅನುಗುಣವಾಗಿ ಘಟಕಗಳಿಂದ ಹೆಚ್ಚುವರಿ ಬಸ್ಸುಗಳ ತ್ವರಿತ ನಿಯೋಜನೆ, ಟಿಕೆಟ್ ವಿತರಣೆ, ಗುರುತಿಸಿರುವ ಸ್ಥಳಗಳಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿ ಸುಗಮ ಸಂಚಾರಕ್ಕೆ ಅನುವಾಗುವ ನಿಟ್ಟಿನಲ್ಲಿ ಎಲ್ಲಾ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದರು.
