ಉದಯವಾಹಿನಿ, ಲಖನೌ: ಎಂಟು ತಿಂಗಳ ಮಗುವನ್ನು ತಲೆಕೆಳಗೆ ಮಾಡಿ ಹಿಡಿದುಕೊಂಡು ವ್ಯಕ್ತಿಯೊಬ್ಬ ಗ್ರಾಮದಲ್ಲಿ ಮೆರವಣಿಗೆ ಮಾಡಿರುವ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ. ಮಗು ಗಾಯಗೊಂಡಿದ್ದು ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪತ್ನಿ ಮತ್ತು ಆಕೆಯ ಕುಟುಂಬದಿಂದ ವರದಕ್ಷಿಣೆ ಪಡೆಯಲು ಆತ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ.
ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಸಂಜು ಎಂಬಾತ ಪತ್ನಿ ಮತ್ತು ಆಕೆಯ ಕುಟುಂಬದವರಿಂದ ವರದಕ್ಷಿಣೆ ಪಡೆಯುವ ಸಲುವಾಗಿ ತನ್ನ 8 ತಿಂಗಳ ಮಗುವನ್ನು ತಲೆಕೆಳಗಾಗಿ ಹಿಡಿದುಕೊಂಡು ಹಳ್ಳಿಯ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾನೆ. ಈ ಕೃತ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.
ವರದಕ್ಷಿಣೆಗಾಗಿ ಪತ್ನಿಯೊಂದಿಗೆ ನಿರಂತರ ಜಗಳ ಮಾಡುತ್ತಿದ್ದ ಸಂಜು ಬೇಡಿಕೆಯನ್ನು ಆಕೆ ಒಪ್ಪದೇ ಇದ್ದಾಗ ಈ ಕೃತ್ಯ ಎಸಿದ್ದಾನೆ. ಸಂಜು ತನ್ನ ಪತ್ನಿಯಿಂದ ಪದೇ ಪದೆ ಹಣ ಮತ್ತು ಕಾರಿಗಾಗಿ ಬೇಡಿಕೆ ಇಡುತ್ತಿದ್ದ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಂಜು ಪತ್ನಿ ಸುಮನ್, ʼʼ2023ರಲ್ಲಿ ನಮ್ಮ ಮದುವೆಯಾಗಿದೆ. ಮದುವೆಯಾದ ಬಳಿಕ ವರದಕ್ಷಿಣೆಗಾಗಿ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ಗಂಡನ ಮನೆಯವರೆಲ್ಲರೂ ನನ್ನಲ್ಲಿ 2 ಲಕ್ಷ ರೂ. ಮತ್ತು ಕಾರು ತಂದು ಕೊಡುವಂತೆ ಪೀಡಿಸಿ ನನ್ನನ್ನು ಥಳಿಸುತ್ತಿದ್ದರುʼʼ ಎಂದು ತಿಳಿಸಿದ್ದಾರೆ.
