ಉದಯವಾಹಿನಿ, ಬೆಂಗಳೂರು: ಮಹದಾಯಿ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ ಎಂಬ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರ ಹೇಳಿಕೆ ಖಂಡನೀಯ. ಸುಪ್ರೀಂ ಕೋರ್ಟ್‌ನಲ್ಲಿ ನಾವು ಸಲ್ಲಿಸಿರುವ ಅರ್ಜಿ ಹಿಂಪಡೆದು, ಶೀಘ್ರವೇ ಕಾಮಗಾರಿ ಆರಂಭಿಸುತ್ತೇವೆ. ಅವರು ಅದನ್ನು ತಡೆಯಲಿ, ನಾನೂ ನೋಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಗುಡುಗಿದ್ದಾರೆ. ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.

ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಮಹದಾಯಿ ಯೋಜನೆ ಆರಂಭಿಸಲು ಅನುಮತಿ ನೀಡುವುದಿಲ್ಲ ಎಂದು ಗೋವಾ ಸಿಎಂ ನೀಡಿರುವ ಹೇಳಿಕೆ ಬಗ್ಗೆ ಅವರು ಪ್ರತಿಕ್ರಿಯಿಸಿರುವ ಡಿಸಿಎಂ, ಗೋವಾ ಸಿಎಂ ಮಾನಸಿಕ ಸ್ಥಿಮಿತ ಕಳೆದುಕೊಂಡು ಈ ರೀತಿ ಮಾತನಾಡಿದ್ದಾರೆ. ಅವರಿಗೆ ದೇಶದ ಒಕ್ಕೂಟ ವ್ಯವಸ್ಥೆ ಮೇಲೆ ಗೌರವವಿಲ್ಲ. ಮಹದಾಯಿ ವಿಚಾರದಲ್ಲಿ ನ್ಯಾಯಾಧಿಕರಣದ ತೀರ್ಪು ಹೊರಬಿದ್ದಿದೆ. ಯೋಜನೆ ಜಾರಿಗೆ ಸಂಬಂಧಿಸಿದಂತೆ ಟೆಂಡರ್ ಕರೆಯಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಅವರು, ಸ್ಥಳೀಯ ಸಂಸದರು ಹಾಗೂ ಕೇಂದ್ರದ ಹಾಲಿ ಸಚಿವರಾದ ಪ್ರಲ್ಹಾದ್‌ ಜೋಶಿ ಅವರು ಈ ಯೋಜನೆ ಜಾರಿಯಾಗಲಿದೆ ಎಂದು ಸಂಭ್ರಮಾಚರಣೆ ಮಾಡಿದ್ದರು ಎಂದರು.
ಈ ವಿಚಾರವಾಗಿ ರಾಜ್ಯದ ಎಲ್ಲಾ ಸಂಸದರನ್ನು ಭೇಟಿ ಮಾಡುತ್ತೇನೆ. ಇದು ನಮ್ಮ ರಾಜ್ಯದ ಸ್ವಾಭಿಮಾನದ ಪ್ರಶ್ನೆ. ಈ ವಿಚಾರದಲ್ಲಿ ನಮ್ಮ ಸಂಸದರು ಬಾಯಿ ಮುಚ್ಚಿಕೊಂಡಿರುವುದೇ ದೊಡ್ಡ ತಪ್ಪು. ನಮ್ಮ ರಾಜ್ಯದ 28 ಲೋಕಸಭೆ ಸದಸ್ಯರು, 12 ರಾಜ್ಯಸಭೆ ಸದಸ್ಯರು ಒಗ್ಗಟ್ಟಿನಿಂದ ಹೋರಾಡಿ ರಾಜ್ಯದ ಗೌರವ ಕಾಪಾಡಬೇಕಾಗಿದೆ. ಗೋವಾದ ಕೇವಲ ಒಂದು ಸಂಸದರಿಗಾಗಿ ನಮ್ಮ ಕರ್ನಾಟಕವನ್ನು ಮಾರಿಕೊಳ್ಳಲು ಸಾಧ್ಯವಿಲ್ಲ. ಈ ವಿಚಾರವಾಗಿ ಬಿಜೆಪಿ ಸಂಸದರು, ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸರ್ಕಾರದ ಸಚಿವರು ಹಾಗೂ ಪ್ರಧಾನಮಂತ್ರಿಗಳ ಮೇಲೆ ಒತ್ತಡ ಹಾಕಬೇಕು. ನಾನು ಕೂಡ ಕೇಂದ್ರ ಜಲಶಕ್ತಿ ಸಚಿವರು ಹಾಗೂ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಲು ಸಮಯಾವಕಾಶ ಕೇಳುತ್ತೇನೆ. ಎಲ್ಲಾ ಸಂಸದರ ನಿಯೋಗವನ್ನು ಕರೆದೊಯ್ಯುವ ಪ್ರಯತ್ನ ಮಾಡುತ್ತೇನೆ. ಎಲ್ಲರೂ ಬರುವ ನಂಬಿಕೆ ಇದೆ. ಯಾರು ಬರುತ್ತಾರೋ ಬಿಡುತ್ತಾರೋ ನಮ್ಮ ಕೆಲಸ ನಾವು ಮಾಡುತ್ತೇವೆ.

Leave a Reply

Your email address will not be published. Required fields are marked *

error: Content is protected !!