ಉದಯವಾಹಿನಿ, ದೆಹಲಿ: ಎಲ್ಲಿಗಾದರೂ ಪ್ರಯಾಣಿಸಬೇಕಾದರೆ ವಿಶೇಷವಾಗಿ ನಗರಗಳಲ್ಲಿ ರ‍್ಯಾಪಿಡೊ ಅಥವಾ ಉಬರ್ ಬೈಕ್ ಅನ್ನು ಅನೇಕರು ಅವಲಂಬಿಸುತ್ತಾರೆ. ಬೆಂಗಳೂರಿನಲ್ಲಿ ಇದು ನಿಷೇಧವಿದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಾಲ್ತಿಯಲ್ಲಿದೆ. ಬಹುತೇಕರಿಗೆ ಇದು ಬಹಳ ಸಹಾಯಕಾರಿ ಎನಿಸಿಕೊಂಡಿದೆ. ಆದರೀಗ, ಆಘಾತಕಾರಿ ಘಟನೆಯೊಂದು ವೈರಲ್ ಆಗಿದ್ದು, ಯುವತಿಯೊಬ್ಬರು ರ‍್ಯಾಪಿಡೊ ಬೈಕ್ ಸವಾರಿಯ ಸಮಯದಲ್ಲಿ ತನಗಾದ ಅಪಘಾತವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಿಯಾಂಕಾ ಎಂದು ಯುವತಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೊದಲ್ಲಿ ಯುವತಿಗೆ ಸಂಭವಿಸಿದ ಅಪಘಾತವೂ ಕಂಡುಬಂದಿದೆ. ಈ ವಿಡಿಯೊ ರಸ್ತೆ ಸುರಕ್ಷತೆ, ಸವಾರಿಯ ಜವಾಬ್ದಾರಿಗಳ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ.
ಪ್ರಿಯಾಂಕಾ ರ‍್ಯಾಪಿಡೊ ಬೈಕ್ ಬುಕ್ ಮಾಡಿದರು. ಆದರೆ ಶೀಘ್ರದಲ್ಲೇ ತಾನು ಅಸುರಕ್ಷಿತವಾಗಿದ್ದೇನೆ ಎನ್ನುವ ಭಾವನೆ ಮೂಡಿತು ಎಂದು ಹೇಳಿದ್ದಾರೆ. ಚಾಲಕ ತನಗೆ ಹೆಲ್ಮೆಟ್ ನೀಡಲು ನಿರಾಕರಿಸಿದ್ದಾಗಿ ಆರೋಪಿಸಿದ್ದಾರೆ. ಅವನು ಹೆಲ್ಮೆಟ್ ಇಲ್ಲದೆ ಸವಾರಿ ಮಾಡುತ್ತಿರುವುದು ಸಹ ಕಂಡುಬಂದಿದೆ. ಚಾಲಕ ಪದೇ ಪದೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾನೆ ಮತ್ತು ರಾಂಗ್ ಸೈಡ್‌ನಲ್ಲಿ ಚಾಲನೆ ಮಾಡಿದ್ದಾನೆ ಎಂದು ಹೇಳಿದರು. ಅಸುರಕ್ಷಿತ ಎಂದು ಭಾವಿಸಿ, ಸವಾರಿಯ ಸಮಯದಲ್ಲಿ ಯುವತಿ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾಳೆ. ರ‍್ಯಾಪಿಡೊ ಬೈಕ್ ಸವಾರ ಚಾಲನೆ ಮಾಡುತ್ತಿರುವ ರೀತಿಯಿಂದ ನನಗೆ ತುಂಬಾ ಅಸುರಕ್ಷಿತ ಅನಿಸಿದ್ದು ಇದೇ ಮೊದಲು ಎಂದು ಪ್ರಿಯಾಂಕಾ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
