ಉದಯವಾಹಿನಿ, ಬೀಜಿಂಗ್: 5 ವರ್ಷಗಳ ಬಳಿಕ ಭಾರತ , ಚೀನಾ ಪ್ರಜೆಗಳಿಗೆ ಪ್ರವಾಸಿ ವೀಸಾ ನೀಡುವ ಪ್ರಕ್ರಿಯೆಯನ್ನು ಆರಂಭಿಸಲಿದೆ ಎಂದು ಬೀಜಿಂಗ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ತಿಳಿಸಿದೆ.ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ 2020ರಲ್ಲಿ ಚೀನಾ ಪ್ರಜೆಗಳಿಗೆ ವೀಸಾ ರದ್ದುಗೊಳಿಸಲಾಗಿತ್ತು. ಕೋವಿಡ್ ಬಳಿಕ ಪೂರ್ವ ಲಡಾಖ್ ಗಡಿಯ ವಿಚಾರವಾಗಿ ವೀಸಾ ನಿರ್ಬಂಧ ಮುಂದುವರೆದಿತ್ತು. ಈ ವಾರದಿಂದ ಚೀನಾ ಪ್ರಜೆಗಳು ಪ್ರವಾಸಿ ವೀಸಾಗೆ ಅರ್ಜಿ ಸಲ್ಲಿಸಬಹುದು ಎಂದು ಭಾರತೀಯ ರಾಯಭಾರ ಕಚೇರಿ ಹೇಳಿದೆ.ಬೀಜಿಂಗ್, ಶಾಂಘೈ ಮತ್ತು ಗುವಾಂಗ್‌ಝೌನಲ್ಲಿರುವ ಆಯಾ ಭಾರತೀಯ ವೀಸಾ ಅರ್ಜಿ ಕೇಂದ್ರಗಳಲ್ಲಿ ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ವೀಸಾಗೆ ಅರ್ಜಿ ಸಲ್ಲಿಸಬಹುದು.
ಗಾಲ್ವಾನ್ ಕಣಿವೆಯಲ್ಲಿ ನಡೆದ ಮಿಲಿಟರಿ ಘರ್ಷಣೆ ನಂತರ ತೀವ್ರ ಹದಗೆಟ್ಟ ದ್ವಿಪಕ್ಷೀಯ ಸಂಬಂಧಗಳನ್ನು ಸರಿಪಡಿಸುವ ಭಾಗವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಜೊತೆ ಮಾತುಕತೆ ನಡೆಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
