ಉದಯವಾಹಿನಿ, ಮಲೆನಾಡು ಹೆಸರಿಗೆ ತಕ್ಕಂತೆ ಮಲೆಗಳ ನಾಡು. ಎಲ್ಲಿ ನೋಡಿದರು ದಟ್ಟವಾದ ಹಚ್ಚ ಹಸಿರಿನ ಕಾಡುಗಳು, ಬೆಟ್ಟಗಳು, ನದಿಗಳು, ಜಲಪಾತಗಳು… ಇದನ್ನು ಭೂ ಲೋಕದ ಸ್ವರ್ಗ ಎಂದರೂ ತಪ್ಪಾಗಲಾರದು. ಅದರಲ್ಲೂ ಮಳೆಗಾಲದಲ್ಲಂತೂ ಮಲೆನಾಡಿನ ಸೌಂದರ್ಯ ಮತ್ತಷ್ಟು ಇಮ್ಮಡಿಗೊಳ್ಳುತ್ತದೆ. ನಿಸರ್ಗದ ಈ ಸೌಂದರ್ಯವನ್ನು ಸವಿಯಲೆಂದೇ ಪ್ರಕೃತಿ ಪ್ರೇಮಿಗಳು ಜಿಟಿ ಜಿಟಿ ಮಳೆ ಬೀಳುವ ಸಮಯದಲ್ಲಿ ಜೋಗ ಜಲಪಾತ, ಆಗುಂಬೆ, ಕೊಡಚಾದ್ರಿ, ಮುಳ್ಳಯ್ಯನಗಿರಿ, ಕುದುರೆ ಮುಖಕ್ಕೆ ಭೇಟಿ ನೀಡುತ್ತಿರುತ್ತಾರೆ. ಇಂತಹ ಅದ್ಭುತ ತಾಣಗಳಲ್ಲಿ ಚಿಕ್ಕಮಗಳೂರಿನಲ್ಲಿ ನೆಲೆಗೊಂಡಿರುವ ರಾಣಿ ಝರಿ ಶಿಖರವೂ ಒಂದು. ಮಂಜಿನ ಸೆರಗನ್ನು ಆವರಿಸಿರುವ ಈ ಅದ್ಭುತ ಶಿಖರ ಪಶ್ಚಿಮ ಘಟ್ಟಗಳ ಹಿಡನ್ ಜೆಮ್ ತಾಣ ಅಂತಾನೇ ಹೇಳಬಹುದು. ಈ ಅತೀ ಸುಂದರ ತಾಣ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಪ್ರಕೃತಿಯೊಂದಿಗೆ ಒಂದಷ್ಟು ಸಮಯ ಕಳೆಯುತ್ತಾ, ಮನದಲ್ಲಿರುವ ಒತ್ತಡವನ್ನೆಲ್ಲಾ ಕಡಿಮೆ ಮಾಡಬೇಕು ಎಂದುಕೊಂಡಿದ್ದರೆ ನೀವು ತಪ್ಪದೆ ಈ ರಮ್ಯ ರಮಣೀಯ ತಾಣಕ್ಕೆ ಒಂದು ಬಾರಿಯಾದರೂ ಭೇಟಿ ನೀಡಲೇಬೇಕು.
ಭೂ ಲೋಕದ ಸ್ವರ್ಗದಂತಿದೆ ರಾಣಿ ಝರಿ: ಪಶ್ಚಿಮ ಘಟ್ಟಗಳಲ್ಲಿ ಸಹಸ್ರಾರು ಪರ್ವತಶ್ರೇಣಿಗಳಿವೆ. ಈ ಪೈಕಿ ರಾಣಿ ಝರಿಯೂ ಒಂದು. ಮೂಡಿಗೆರೆ ತಾಲೂಕಿನ ಅಂಚಿನಲ್ಲಿರುವ ಚಿಕ್ಕಮಗಳೂರು ಜಿಲ್ಲೆಗೆ ಸೇರಿರುವ ರಾಣಿ ಝರಿಯೆಂಬ ಅದ್ಭುತ ತಾಣಕ್ಕೆ ಪ್ರಕೃತಿ ಪ್ರೇಮಿಗಳು ಒಮ್ಮೆಯಾದರೂ ಭೇಟಿ ನೀಡಲೇಬೇಕು. ಮಂಜಿನ ಸೆರಗಿನಲ್ಲಿ ತನ್ನ ಸೌಂದರ್ಯವನ್ನು ಮುಚ್ಚಿಕೊಂಡಿರುವ ಭೂ ಲೋಕದ ಸ್ವರ್ಗದಂತಿರುವ ಈ ಅದ್ಭುತ ತಾಣ ಪ್ರಕೃತಿ ಪ್ರಿಯರು, ಛಾಯಾಗ್ರಾಹಕರು ಮತ್ತು ಚಾರಣಿಗರಿಗೆ ಭೇಟಿ ನೀಡಲು ಸೂಕ್ತ ಸ್ಥಳವಾಗಿದೆ. ಟ್ರೆಕ್ಕಿಂಗ್ ಮಾಡುತ್ತಾ ರಾಣಿ ಝರಿ ಶಿಖರದ ವ್ಯೂ ಪಾಯಿಂಟ್ ತಲುಪಿದರೆ, ನೀವು ಸ್ವರ್ಗವನ್ನೇ ನೋಡಿದಂತಾಗುತ್ತದೆ. ಎತ್ತರದ ಶಿಖರದಲ್ಲಿ ಮೋಡಗಳ ಓಡಾಟ, ಪಕ್ಷಿಗಳ ಚಿಲಿಪಿಲಿ, ತಂಗಾಳಿ, ಅಹ್ಲಾದಕರ ವಾತಾವರಣ, ಹಚ್ಚಹಸಿರಿನ ಹುಲ್ಲುಗಾವಲು ಪ್ರಕೃತಿಯ ಈ ಸೌಂದರ್ಯವನ್ನು ಸವಿಯುತ್ತಾ ಇಲ್ಲಿ ಸಮಯ ಕಳೆದರೆ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುವುದಂತೂ ಖಂಡಿತ.
