ಉದಯವಾಹಿನಿ, ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ಸಾರ್ವಜನಿಕ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲು ತೀರ್ಮಾನಿಸಲಾಗಿದೆ. 2022ರಲ್ಲಿ ಅಪಘಾತದಲ್ಲಿ ವಿದ್ಯಾರ್ಥಿನಿ ಮೃತಪಟ್ಟಿರುವ ಹಿನ್ನೆಯಲ್ಲಿ ಕ್ಯಾಂಪಸ್ ನಲ್ಲಿ ಸಾರ್ವಜನಿಕ ವಾಹನ ಸಂಚಾರಕ್ಕೆ‌‌ ನಿರ್ಬಂಧಿಸುವಂತೆ ವಿದ್ಯಾರ್ಥಿ ಸಂಘಟನೆ ಹಲವು ವರ್ಷಗಳಿಂದ ಆಗ್ರಹಿಸಿದ್ದವು. ಈ ಬೆನ್ನಲ್ಲೇ ಜ್ಞಾನಭಾರತಿ ಆವರಣದಲ್ಲಿ ನಾಗರಬಾವಿ ಕಡೆಯಿಂದ ವಿಶ್ವವಿದ್ಯಾಲಯಕ್ಕೆ ಸಂಚರಿಸುವ ಸಾರ್ವಜನಿಕ ವಾಹನಗಳನ್ನು ನಿಷೇಧಿಸಲು ಇದೀಗ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಲಾಗಿದೆ.

ಜ್ಞಾನಭಾರತಿಯಲ್ಲಿ ಪ್ರತಿನಿತ್ಯ 25 ಸಾವಿರಕ್ಕೂ ಅಧಿಕ ವಾಹನಗಳ ಸಂಚಾರಿಸುತ್ತಿದ್ದು, ಇದರಿಂದ ಜ್ಞಾನಭಾರತಿಯಲ್ಲಿ ವಾಹನ ದಟ್ಟಣೆಯಾಗುತ್ತಿದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೂ ಸಮಸ್ಯೆಯಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳ ಆಗ್ರಹದ ಬೆನ್ನಲ್ಲೇ ಸಿಂಡಿಕೇಟ್ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಸರ್ಕಾರಕ್ಕೆ ಪತ್ರ ಬರೆಯಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕ್ಯಾಂಪಸ್‌ ರಸ್ತೆಯಲ್ಲಿ ವಿದ್ಯಾರ್ಥಿನಿ ಶಿಲ್ಪಾಶ್ರೀ ಮೇಲೆ 2022ರಲ್ಲಿ ಬಿಎಂಟಿಸಿ ಬಸ್‌ ಹರಿದ ಪ್ರಕರಣದ ಬಳಿಕ ಈ ರಸ್ತೆಯಲ್ಲಿ ಸಾರ್ವಜನಿಕ ವಾಹನ ಸಂಚಾರ ನಿಷೇಧಿಸುವಂತೆ ಆಗ್ರಹಿಸಿ ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಹೋರಾಟ ಮುಂದುವರೆಸಿದ್ದರು. ಇದರಿಂದ ಎಚ್ಚೆತ್ತ ವಿಶ್ವವಿದ್ಯಾಲಯದ ಕುಲಪತಿ ಡಾ. ಜಯಕರ ಅವರು ಪೊಲೀಸ್‌ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು ಹಾಗೂ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ವಿವಿಯ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳು, ಬೋಧಕರು, ಬೋಧಕೇತರ ಸಂಘದ ಪ್ರತಿನಿಧಿಗಳ ಸಭೆ ನಡೆಸಿ ಎಲ್ಲರ ಅಹವಾಲುಗಳು, ಸಲಹೆಗಳನ್ನು ಪಡೆದ ಬಳಿಕ ಕೆಲವೊಂದು ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದರು. ಕ್ಯಾಂಪಸ್‌ನಲ್ಲಿ ಟ್ರಾಫಿಕ್‌ ಎಂಪವರ್ಮೆಂಟ್‌ ಜಾರಿ ಮಾಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!