ಉದಯವಾಹಿನಿ, ಅದು 2000ನೇ ಇಸ್ವಿಯ ಭೀಮನ ಅಮವಾಸ್ಯೆ. ರಾಜ್ಕುಮಾರ್ ಅಂದು ತಿರುಪತಿಗೆ ಹೊಗಿ ಪೂಜೆ ಸಲ್ಲಿಸಿ, ನೇರವಾಗಿ ಬಂದಿದ್ದು ತಮ್ಮ ಹುಟ್ಟೂರಾದ ಗಾಜನೂರಿಗೆ. ಆ ದಿನ ರಾತ್ರಿ ಎಲ್ಲೆಲ್ಲೂ ಕತ್ತಲು ಆವರಿಸಿತ್ತು. ಆ ಊರಿನ ಮನೆಯಲ್ಲಿ ಅಲ್ಲೊಂದು, ಇಲ್ಲೊಂದು ಚಿಮಣಿ ದೀಪ ಉರಿಯುತ್ತಿತ್ತು. ರಾಜ್ಕುಮಾರ್ ಊಟ ಮುಗಿಸಿ ಕುಳಿತಿದ್ದರು. ‘ನಮಗೆ ಸರ್ ಬೇಕು’ ಎಂಬ ಧ್ವನಿ ಹೊರಗಿನಿಂದ ಬಂತು. ಎಲ್ಲರೂ ತಮಿಳಿನಲ್ಲಿ ಮಾತನಾಡುತ್ತಿದ್ದರು. ಹೊರಗೆ ಹೋಗಿ ನೋಡಿದರೆ 15 ಜನರಿದ್ದರು. ಅವರಲ್ಲಿ ಕಾಡುಗಳ್ಳ ವೀರಪ್ಪನ ಕೂಡ ಇದ್ದ. ರಾಜ್ ಕುಮಾರ್, ನಾಗಪ್ಪ, ಎಸ್ಎ ಗೋವಿಂದರಾಜು, ನಾಗೇಶ್ ಅವರುಗಳನ್ನು ಅಪಹರಿಸಿ ಕರೆದುಕೊಂಡು ಹೋಗಲಾಯಿತು.
ಅಪಹರಣ ಮತ್ತು ಬೇಡಿಕೆ : ಜುಲೈ 30ರಂದು ಈ ಅಪಹರಣ ನಡೆಯಿತು. ರಾಜ್ಕುಮಾರ್ ಅವರು ಅಪಹರಣ ಆಗುವ ವೇಳೆ ಪಾರ್ವತಮ್ಮಗೆ ಕ್ಯಾಸೆಟ್ ಒಂದನ್ನು ನೀಡಿದ್ದರು. ಈ ಕ್ಯಾಸೆಟ್ನ ಕೊಟ್ಟಿದ್ದು ವೀರಪ್ಪನ್. ಅದರಲ್ಲಿ ತಮ್ಮ ಬೇಡಿಕೆ ಈಡೇರಿಸಲು ಕೋರಿಕೆ ಇಡಲಾಯಿತು. ನಕ್ಕೀರನ್ ಗೋಪಾಲನ್ ಹೊರಗಿನ ಜಗತ್ತಿಗೂ ಹಾಗೂ ವೀರಪ್ಪನ್ಗೂ ಮಧ್ಯವರ್ತಿ ಆದ. ಸರ್ಕಾರದ ಎದುರು ವೀರಪ್ಪನ್ ಇಡುತ್ತಿದ್ದ ಬೇಡಿಕೆಗಳು ದೊಡ್ಡ ಮಟ್ಟದಲ್ಲೇ ಇದ್ದವು. ಹೀಗಾಗಿ, ಅವುಗಳನ್ನು ಈಡೇರಿವುದು ಸರ್ಕಾರಕ್ಕೆ ಅಸಾಧ್ಯ ಎಂಬಂತಾಗಿತ್ತು. ಕರ್ನಾಟಕದಲ್ಲಿ ತಮಿಳನ್ನಯ ಎರಡನೇ ಆಡಳಿತ ಭಾಷೆಯನ್ನಾಗಿ ಘೋಷಿಸಬೇಕೆಂಬ ಬೇಡಿಕೆಯೂ ಇತ್ತು. ಇದು ಅನೇಕರಿಗಗೆ ಶಾಕಿಂಗ್ ಎನಿಸಿತ್ತು.
