ಉದಯವಾಹಿನಿ, ಬೆಂಗಳೂರು : ರಾಜ್ಯದಲ್ಲಿ ಯಾವುದೇ ಜಿಲ್ಲೆಯಲ್ಲಿಯೂ ರಸಗೊಬ್ಬರ ಪೂರೈಕೆಯಲ್ಲಿ ಕೊರತೆ ಇಲ್ಲ. ರೈತರು ಆತಂಕಕ್ಕೆ ಈಡಾಗಬಾರದು, ಅಲ್ಲದೆ ಬೇಡಿಕೆ ಹೆಚ್ಚಿರುವ ಪ್ರದೇಶಗಳಿಗೆ ಹೆಚ್ಚುವರಿ ಉಳಿಕೆ ಇರುವ ಇತರೆಡೆಗಳಿಂದ ವರ್ಗಾವಣೆ ಮಾಡಿ ಸರಿದೂಗಿಸಲಾಗುವುದು ಎಂದು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ರವರು ತಿಳಿಸಿದ್ದಾರೆ.ವಿಕಾಸ ಸೌಧದ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಸುದ್ಧಿಗಾರರಿಗೆ ಈ ವಿಷಯ ಸ್ಪಷ್ಟಪಡಿಸಿದ ಸಚಿವರು ರೈತರಿಗೆ ಯಾವುದೇ ರೀತಿ ತೊಂದರೆಗಳಾಗದಂತೆ ನಿಗಾ ವಹಿಸಲು ಇಲಾಖೆಯ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಈ ವರ್ಷ ಮುಂಗಾರು ಬೇಗ ಆರಂಭವಾದ ಕಾರಣ ಹಾಗೂ ಸುಮಾರು 2 ಲಕ್ಷ ಹೆಕ್ಟೇರ್ ಮುಸಿಕನ ಜೋಳ ಪ್ರದೇಶ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ಕೆಲವು ರೈತರು ಆತಂಕದಿಂದ ಆಗಸ್ಟ್ – ಸೆಪ್ಟೆಂಬರ್ ಗೆ ಬೇಕಾದ ಗೊಬ್ಬರವನ್ನ ಈಗಲೇ ಖರೀದಿಸಲು ಮುಂದಾಗಿದ್ದು ಸಹ ತಕ್ಷಣ ಬೇಡಿಕೆ ಹೆಚ್ಚಲು ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ನಮ್ಮ ಗುರಿಗಿಂತ ಹೆಚ್ಚಿನ ದಾಸ್ತಾನು ಲಭ್ಯವಿದೆ, ಜುಲೈ ಮಾಹೆಯ ಬೇಡಿಕೆಯಂತೆ ಆಧಾರದಲ್ಲಿನ ವಿತರಣೆಯ ನಂತರವೂ ದಾಸ್ತಾನು ಉಳಿಕೆ ಇದೆ ಒಂದು ವೇಳೆ ಕೆಲವು ನಿರ್ಧಿಷ್ಟ ಪ್ರದೇಶಗಳಲ್ಲಿ ಯೂರಿಯಾ ಸೇರಿದಂತೆ ರಸಗೊಬ್ಬರದ ಕೊರತೆ ಕಂಡುಬಂದಲ್ಲಿ ಹೆಚ್ಚುವರಿಯಾಗಿ ಉಳಿಕೆಯಾಗಿರುವ ಜಿಲ್ಲೆಗಳಿಂದ ಮರುವಿಂಗಡಣೆ ಮಾಡಿ, ಸರಬರಾಜು ಮಾಡಲಾಗುವುದು, ಕೃಷಿಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಸಚಿವ ಎನ್. ಚಲುವರಾಯಸ್ವಾಮಿ ಮನವಿ ಮಾಡಿದರು. ಜುಲೈ ಮಾಹೆಯ ವರೆಗೆ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 5,34,009 ಮೆ.ಟನ್. ರಸಗೊಬ್ಬರ (ಎಲ್ಲಾ ವಿಧದ ರಸಗೊಬ್ಬರ ಸೇರಿ) ಹಂಚಿಕೆಯಾಗಿದೆ. ಇದರಲ್ಲಿ ಈವರೆಗೆ 4,30,633 ಮೆ.ಟನ್. ಸರಬರಾಜಾಗಿದೆ. ಏಪ್ರಿಲ್ ನಿಂದ ಜುಲೈವರೆಗೆ ರಾಜ್ಯದಲ್ಲಿ 6,80,655 ಮೆಟ್ರಿಕ್ ಟನ್ ಯೂರಿಯಾ ಬೇಡಿಕೆ ಇದ್ದು, ಕೇಂದ್ರ ಸರ್ಕಾರದಿಂದ 6,82,500 ಮೆ. ಟನ್ ಹಂಚಿಕೆಯಾಗಿದೆ. ಇದರಲ್ಲಿ 5,26,817 ಮೆಟ್ರಿಕ್ ಟನ್ ಸರಬರಾಜಾಗಿದೆ.
