
ಉದಯವಾಹಿನಿ, ನ್ಯೂಯಾರ್ಕ್: ಅಕಾಡೆಮಿ ಪ್ರಶಸ್ತಿ ವಿಜೇತೆ, ಉದ್ಯಮಿ, ಮತ್ತು ಕೋಲ್ಡ್‌ಪ್ಲೇ (Coldplay) ಗಾಯಕ ಕ್ರಿಸ್ ಮಾರ್ಟಿನ್‌ರ (Chris Martin) ಮಾಜಿ ಪತ್ನಿ ಗ್ವಿನೆತ್ ಪಾಲ್ಟ್ರೋ (Gwyneth Paltrow) ಅವರನ್ನು ಆಸ್ಟ್ರೊನಾಮರ್ (Astronomer) ತಾತ್ಕಾಲಿಕ ವಕ್ತಾರೆಯಾಗಿ ನೇಮಿಸಿದೆ. ಕೋಲ್ಡ್‌ಪ್ಲೇ ಕಾನ್ಸರ್ಟ್‌ನಲ್ಲಿ ‘ಕಿಸ್ ಕ್ಯಾಮ್’ ಘಟನೆ ವೈರಲ್ ಆದ ಬಳಿಕ CEO ಆಂಡಿ ಬೈರನ್ ಮತ್ತು HR ಮುಖ್ಯಸ್ಥೆ ಕ್ರಿಸ್ಟಿನ್ ಕ್ಯಾಬೊಟ್ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಆಸ್ಟ್ರೊನಾಮರ್‌ನ ವಿಡಿಯೋದಲ್ಲಿ ಮಾತನಾಡಿರುವ ಪಾಲ್ಟ್ರೋ, “ನಾನು ಗ್ವಿನೆತ್ ಪಾಲ್ಟ್ರೋ. 300ಕ್ಕೂ ಹೆಚ್ಚು ಉದ್ಯೋಗಿಗಳ ಪರವಾಗಿ ತಾತ್ಕಾಲಿಕವಾಗಿ ಮಾತನಾಡಲು ಆಸ್ಟ್ರೊನಾಮರ್‌ನಿಂದ ನೇಮಕಗೊಂಡಿದ್ದೇನೆ. ಕಳೆದ ಕೆಲವು ದಿನಗಳಿಂದ ಉದ್ಭವಿಸಿರುವ ಅನೇಕ ಪ್ರಶ್ನೆಗಳಿಗೆ ಉತ್ತರಿಸಲು ಕಂಪನಿಯು ಇಚ್ಛಿಸಿದೆ” ಎಂದಿದ್ದಾರೆ. ಪಾಲ್ಟ್ರೋ ಮತ್ತು ಕ್ರಿಸ್ ಮಾರ್ಟಿನ್ 2003ರಿಂದ 2016ರವರೆಗೆ ವಿವಾಹ ಆಗಿದ್ದರು.
ಮ್ಯಾಸಚೂಸೆಟ್ಸ್‌ನ ಗಿಲ್ಲೆಟ್ ಸ್ಟೇಡಿಯಂನಲ್ಲಿ ನಡೆದ ಕೋಲ್ಡ್‌ಪ್ಲೇ ಕಾನ್ಸರ್ಟ್‌ನಲ್ಲಿ ಕ್ಯಾಬೊಟ್ ಮತ್ತು ಬೈರನ್ ಇಬ್ಬರೂ ‘ಕಿಸ್ ಕ್ಯಾಮ್’ನಲ್ಲಿ ಆತ್ಮೀಯ ಕ್ಷಣದಲ್ಲಿ ಕಾಣಿಸಿಕೊಂಡರು. ಕ್ಯಾಮೆರಾದಿಂದ ತಪ್ಪಿಸಿಕೊಳ್ಳಲು ತೋರಿದ ಆತಂಕಕಾರಿ ಪ್ರತಿಕ್ರಿಯೆಯನ್ನು ಕ್ರಿಸ್ ಮಾರ್ಟಿನ್, “ಇವರು ಅಕ್ರಮ ಸಂಬಂಧದಲ್ಲಿರಬಹುದು” ಎಂದು ವಿನೋದವಾಗಿ ಹೇಳಿದ್ದರು. ಈ ವಿಡಿಯೋ ವೈರಲ್ ಆಗಿ, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು.
