ಉದಯವಾಹಿನಿ, ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ಭಾರೀ ಗಾಳಿ ಸಹಿತ ಮಳೆ ಪ್ರಮಾಣ ಹೆಚ್ಚಾಗಿದ್ದು, ಜಿಲ್ಲೆಯ ನಾನಾ ಭಾಗಗಳಲ್ಲಿ ಮಳೆಯ ಅವಾಂತರಗಳು ಮುಂದುವರಿಯುತ್ತಿದೆ. ಈ ನಡುವೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ ಗ್ರಾಮದಲ್ಲಿಂದು ಬೆಳಗ್ಗೆ 5:30ರ ಸುಮಾರಿಗೆ ಮಳೆ ಗಾಳಿಗೆ ಮನೆ ಕುಸಿದು ಬಿದ್ದು ಕಾರ್ಮಿಕ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ. ಮಹಿಳೆ ಮೃತಪಟ್ಟಿದ್ದು, ಆಕೆಯ ಮಕ್ಕಳು ಹಾಗೂ ಸಹೋದರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾನಗಲ್ ಗ್ರಾಮದ ಗಣಪತಿ ದೇವಸ್ಥಾನದ ಸಮೀಪದಲ್ಲಿರುವ ಸುಷ್ಮಾ (37) ಮೃತ ಮಹಿಳೆ ಆಗಿದ್ದಾರೆ. ಇವರ ಮೂವರು ಮಕ್ಕಳು ಹಾಗೂ ಸಹೋದರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಳೆಯಲ್ಲೇ ಕೊಡಗಿನಲ್ಲಿ ಕಾರ್ಗಿಲ್ ವಿಜಯೋತ್ಸವ: ಇನ್ನೂ ಸೇನಾನಾಡು ಕೊಡಗಿನಲ್ಲಿ ಕಾರ್ಗಿಲ್ ವಿಜಯೋತ್ಸವವನ್ನ (Kargil Vijay Diwas) ಸಂಭ್ರಮದಿಂದ ಆಚರಿಸಲಾಯಿತು. ಮಳೆಯನ್ನು ಲೆಕ್ಕಿಸದೇ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ನಿಂದ ಮಡಿಕೇರಿ ನಗರದ ಯುದ್ಧ ಸ್ಮಾರಕ ಬಳಿ ಪುಷ್ಪ ನಮನ ಸಲ್ಲಿಸುವ ಮೂಲಕ ಯೋಧರಿಗೆ ಗೌರವ ಸಲ್ಲಿಲಾಯಿತು.
