ಉದಯವಾಹಿನಿ, ರಾಯಚೂರು: ಇರಾನ್ ​​​-ಇಸ್ರೇಲ್​​​​​​ ಮಧ್ಯೆ ನಡೆಯುತ್ತಿರುವ ಯುದ್ಧ ಪರಿಣಾಮ ಹಲವು ವಲಯಗಳಿಗೆ ಬಿಸಿ ತಟ್ಟಿದೆ. ಯುದ್ಧದ ಕಾರ್ಮೋಡ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಭತ್ತ ಬೆಳೆಗೂ ತಗುಲಿ ಮಾರುಕಟ್ಟೆಯಲ್ಲಿ ದರ ಕುಸಿಯುವ ಆತಂಕ ಎದುರಾಗಿದೆ.
ಬಿಸಿಲೂರು ರಾಯಚೂರು ಜಿಲ್ಲೆಯ ಬಲ ಭಾಗದಲ್ಲಿ ಕೃಷ್ಣ, ಎಡ ಭಾಗದಲ್ಲಿ ತುಂಗಭದ್ರಾ ನದಿಗಳೆರಡು ವಿಶಾಲವಾಗಿ ಹರಿಯುತ್ತಿವೆ. ಈ ನದಿಗಳನ್ನು ನೆಚ್ಚಿಕೊಂಡು ಭತ್ತವನ್ನು ಜಿಲ್ಲೆಯಲ್ಲಿ ಲಕ್ಷಾಂತರ ಹೆಕ್ಟೇರ್​ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ವಿಶೇಷವಾಗಿ ಸಿಂಧನೂರು, ಮಸ್ಕಿ, ಮಾನವಿ ಹಾಗೂ ರಾಯಚೂರು ತಾಲೂಕುಗಳಲ್ಲಿ ತುಂಗಭದ್ರಾ ಎಡದಂಡೆ ನಾಲೆಯ ಮೂಲಕ ನೀರಿನ ಲಭ್ಯತೆ ಇರುವುದರಿಂದ ಸೋನಮಸೂರಿ ಹಾಗೂ ಆರ್‌ಎನ್‌ಆರ್ ಜಾತಿಯ ಭತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಲಾಗುತ್ತಿದೆ. ಕೃಷ್ಣ ನದಿಯ ಎನ್​ಆರ್​ಬಿಸಿ ಕಾಲುವೆಯಿಂದ ಸಿಗುವ ಕಾಲುವೆ ನೀರಿನಿಂದ ಜಿಲ್ಲೆಯ ಲಿಂಗಸೂಗೂರು, ದೇವದುರ್ಗ, ರಾಯಚೂರಿನ ಸಾವಿರಾರು ರೈತರು ಭತ್ತ ಬೆಳೆಯ ಮೇಲೆ ಅವಲಂಬಿತರಾಗಿದ್ದಾರೆ.

ಇನ್ನೇನು ಕೆಲ ದಿನಗಳಲ್ಲಿ ಹೊಸದಾಗಿ ಬರುವ ಭತ್ತದ ಫಸಲು ಮಾರುಕಟ್ಟೆಗೆ ಬರಲು ಶುರುವಾದರೆ ಎಪಿಎಂಸಿ ಹಾಗೂ ಅಕ್ಕಿಗಿರಿಣಿ ಮಾಲೀಕರ ವ್ಯಾಪಾರ ವಹಿವಾಟು ಜೋರಾಗಿ ನಡೆಯಲಿದೆ. ಇಲ್ಲಿ ಬೆಳೆದಂತಹ ಅಕ್ಕಿಗೆ ರಾಜ್ಯದ ವಿವಿಧ ಭಾಗಗಳ ಜೊತೆಗೆ ಹೊರ ರಾಜ್ಯಗಳಲ್ಲೂ ಮತ್ತು ವಿದೇಶಗಳಲ್ಲೂ ಉತ್ತಮ ಬೇಡಿಕೆ ಇದೆ. ಇಲ್ಲಿನ ಅಕ್ಕಿ ಗಿರಣಿಗಳಲ್ಲಿ ಸಂಸ್ಕರಣೆಗೊಂಡ ಅಕ್ಕಿಯನ್ನು ದೇಶದ ವಿವಿಧ ಮಾರುಕಟ್ಟೆಗಳ ಜೊತೆಗೆ ವಿದೇಶಗಳಿಗೂ ರಫ್ತು ಮಾಡಲಾಗುತ್ತದೆ. ಆದರೆ ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಜಲಸಾರಿಗೆ ಮೂಲಕ ನಡೆಯುವ ಹಡಗು ಸಾಗಾಣಿಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಇದರಿಂದ ವಿದೇಶಗಳಿಗೆ ಅಕ್ಕಿ ಸಾಗಾಣಿಕೆ ತೊಂದರೆ ಎದುರಾಗಬಹುದು ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ರಫ್ತು ವ್ಯವಹಾರದಲ್ಲಿ ಸಮಸ್ಯೆ ಉಂಟಾದರೆ ಗಿರಣಿಗಳಲ್ಲಿ ಅಕ್ಕಿ ಸಂಗ್ರಹ ಹೆಚ್ಚಾಗುವ ಸಾಧ್ಯತೆ ಇದೆ. ಇದರ ನೇರ ಪರಿಣಾಮ ಸ್ಥಳೀಯ ಮಾರುಕಟ್ಟೆಗೆ ತಗಲಿದ್ದು, ಅಕ್ಕಿ ಮತ್ತು ಭತ್ತದ ಬೇಡಿಕೆ ಕುಸಿದು ದರ ಇಳಿಕೆಯಾಗುವ ಭೀತಿ ಎದುರಾಗಿದೆ. ದರ ಕುಸಿದರೆ ರೈತರು ಮತ್ತು ಗಿರಣಿ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯನ್ನು ಅಲ್ಲಗೆಳೆಯುವಂತೆ ಇಲ್ಲ.ರಾಯಚೂರು ಜಿಲ್ಲೆಯ ಸೇರಿದಂತೆ ನೆರೆಯ ತೆಲಂಗಾಣ ಹಾಗೂ ಆಂಧ್ರದಿಂದಲೂ ಸಹ ರಾಯಚೂರು ಮಾರುಕಟ್ಟೆಗೆ ಭತ್ತದ ಮೂಟೆಗಳು ಬರುತ್ತವೆ. ಯುದ್ಧ ಪರಿಣಾಮದಿಂದ ಭತ್ತ ಬೆಳೆಯುವ ರೈತನಿಗೆ ಬೆಲೆ ಕುಸಿಯುವ ಆತಂಕವು ಎದುರಾಗಲಿದೆ. ಹೀಗಾಗಿ ರಾಜ್ಯ ಸರ್ಕಾರ ಸಹ ಭತ್ತ ಖರೀದಿ ಕೇಂದ್ರವನ್ನು ಆರಂಭಿಸಬೇಕು, ಜೊತೆಗೆ ನೆರೆಯ ಆಂಧ್ರದಲ್ಲಿ ನೀಡುವ ಹಾಗೆ ಬೆಂಬಲ ಬೆಲೆಯ ಪ್ರೋತ್ಸಾಹ ಧನವನ್ನು ನೀಡಬೇಕು ಎನ್ನುವುದು ರೈತರು ಒತ್ತಾಯವಾಗಿದೆ.

 

 

Leave a Reply

Your email address will not be published. Required fields are marked *

error: Content is protected !!