ಉದಯವಾಹಿನಿ, ದಾವಣಗೆರೆ: ನಗರದ ಖ್ಯಾತ ಹೋಟೆಲ್‌‌ನಲ್ಲಿ ಒಂದಾದ ಪಂಜುರ್ಲಿ ಪ್ಯಾಲೇಸ್ ಹೋಟೆಲ್​ಗೆ ಈಗ ಗ್ಯಾಸ್ ಬಿಸಿ ತಟ್ಟಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್ ಮುಚ್ಚದೆ ನಂಬಿದ ಗ್ರಾಹಕರಿಗೆ ನೆಚ್ಚಿನ ಊಟ ಉಣ ಬಡಿಸುವ ಕೆಲಸವನ್ನು ಪಂಜುರ್ಲಿ ಪ್ಯಾಲೇಸ್ ಹೋಟೆಲ್ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕಟ್ಟಿಗೆ ಒಲೆ ಮೊರೆ ಹೋಗಿರುವ ಹೋಟೆಲ್‌ ಮಾಲೀಕರು ಪ್ರತ್ಯೇಕ ಕಟ್ಟಿಗೆ ಒಲೆ ವ್ಯವಸ್ಥೆ ಮಾಡಿದ್ದು, ಸಮಸ್ಯೆ ಹೀಗೆ ಮುಂದುವರೆದರೆ ಹೋಟೆಲ್ ಮೆನುವಿನಲ್ಲಿ ಕೊಂಚ ಬದಲಾವಣೆ ಮಾಡಲು ಚಿಂತನೆ‌ ನಡೆಸಿದೆ. ಈಗಾಗಲೇ ಹೋಟೆಲ್ ಹಿಂಭಾಗದಲ್ಲಿ ಮೂರ್ನಾಲ್ಕು ಸೌದೆ ಒಲೆಗಳ ವ್ಯವಸ್ಥೆ ಮಾಡಿ ಅಡುಗೆ ತಯಾರಿಸಲಾಗುತ್ತಿದೆ.

ಬರುವ ಗ್ರಾಹಕರಿಗೆ ನಿರಾಸೆ ಮೂಡಿಸದೇ ಸೌದೆ ಒಲೆಯಲ್ಲೇ ತಯಾರಿಸಿದ ಆಹಾರ ಉಣಬಡಿಸುತ್ತಿದ್ದಾರೆ.‌ ಸದ್ಯ ಹೋಟೆಲ್​​ಗೆ 2-3 ಸಿಲಿಂಡರ್ ಅವಶ್ಯಕತೆ ಇದ್ದು, ಒಂದು ಸಿಲಿಂಡರ್ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಮ್ಯಾನೇಜರ್​​ಗಳು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ. ಇದಲ್ಲದೆ ನಗರದ ಭರಣಿ ಹೋಟೆಲ್, ಆಹಾರ್ 2000, ಗೋಕುಲ, ಆದ್ಯಾ ನಾನ್ ವೆಜ್ ಹೋಟೆಲ್, ತುಳಜಭವಾನಿ ಹೋಟೆಲ್​​ಗಳಿಗೂ ಗ್ಯಾಸ್ ಸಮಸ್ಯೆ ಎದುರಾಗಿದ್ದು, ಗ್ಯಾಸ್ ಹೆಚ್ಚು ಬಳಕೆ ಆಗುವ ಐಟಂಗಳನ್ನು ಮೆನುವಿನಿಂದ ಕೈಬಿಟ್ಟಿದ್ದಾರೆ. ಇನ್ನು ಆದ್ಯಾ ನಾನ್ ಹೋಟೆಲ್​​ನಲ್ಲಿ ತಲೆ ಮಟನ್, ಬೋಟಿ ಫ್ರೈ ಐಟಂಗಳನ್ನು ಕೈಬಿಡಲಾಗಿದೆ. ಆಹಾರ್ 2000 ಹೋಟೆಲ್​​ನಲ್ಲಿ ಪೂರಿ, ಉದ್ದಿನ ವಡೆ, ಮಿರ್ಚಿಯನ್ನು ನಿಲ್ಲಿಸಲಾಗಿದೆ.
ಇನ್ನು ಸರ್ ಎಂವಿ ಕಾಲೇಜಿನ ವಿದ್ಯಾರ್ಥಿ ನಿಲಯದ ಮಕ್ಕಳಿಗೆ ಸೌದೆ ಒಲೆಯಲ್ಲೇ ಅಡುಗೆ ಮಾಡಿ ಉಣ ಬಡಿಸಲಾಗುತ್ತಿದೆ.

ಈ ಕುರಿತು ಪಂಜುರ್ಲಿ ಹೋಟೆಲ್ ಮ್ಯಾನೇಜರ್ ಸಂದೀಪ್ ಅವರು ಮಾತನಾಡಿ, ಕಮರ್ಷಿಯಲ್ ಸಿಲಿಂಡರ್ ಸಿಗದೇ ಇರುವುದು ಬಹುದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆ ನಮಗೆ ಕೊರೊನಾಗಿಂತ ಕಠಿಣವಾಗಿದೆ. ಸಿಲಿಂಡರ್ ಸಿಗದೆ ಇದ್ದುದರಿಂದ ಸೌದೆ ಒಲೆಯತ್ತ‌ ಮುಖ‌ ಮಾಡಿದ್ದೇವೆ. ಅಂದರೆ 25 ವರ್ಷದ ಹಿಂದೆ ಹೋದಂತೆ ಆಗಿದೆ. ಈ ಹೋಟೆಲ್ ಉದ್ಯಮ ನಂಬಿ ಲಕ್ಷಾಂತರ ಮಂದಿ ದಾವಣಗೆರೆಯಲ್ಲಿದ್ದಾರೆ. ತಕ್ಷಣ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮನವಿ ಮಾಡಿದರು. ಒಂದಾದರೂ ಸಿಲಿಂಡರ್ ಕೊಡುವ ಕೆಲಸ ಸರ್ಕಾರ ಮಾಡಬೇಕು: ಕನಿಷ್ಠ ಎಂದರೂ ಒಂದಾದರೂ ಸಿಲಿಂಡರ್ ಕೊಡುವ ಕೆಲಸವನ್ನು ಸರ್ಕಾರ ಮಾಡ್ಬೇಕು. ನಮಗೆ ದಿನಕ್ಕೆ 2-3 ಸಿಲಿಂಡರ್ ಬೇಕಾಗುತ್ತದೆ. ಕನಿಷ್ಠ ಒಂದು ಸಿಲಿಂಡರ್ ವ್ಯವಸ್ಥೆ ಮಾಡಬೇಕು. ಸಿಲಿಂಡರ್ ಸಿಗದೆ ಸೌದೆ ಒಲೆಯಲ್ಲೇ ಅಡುಗೆ ಮಾಡಿ ಗ್ರಾಹಕರಿಗೆ ಕೊಡುತ್ತಿದ್ದೇವೆ. ಬಿರಿಯಾನಿ, ರೈಸ್, ಗ್ರೇವಿ ಸೇರಿದಂತೆ ಎಲ್ಲಾ ಐಟಂಗಳನ್ನು ತಯಾರು ಮಾಡುತ್ತಿದ್ದೇವೆ. ಗ್ರಾಹಕರಿಗೆ ಆಹಾರ ಬಿಸಿ ಮಾಡಿಕೊಡಲು ನಮಗೆ ಸಿಲಿಂಡರ್ ಅವಶ್ಯಕತೆ ಇದೆ‌. ಹೆಚ್ಚು ಗ್ಯಾಸ್ ಬಳಕೆಯಾಗುವ ಐಟಂಗಳನ್ನು ನಿಲ್ಲಿಸಬೇಕೆಂಬ ನಿರ್ಧಾರಕ್ಕೆ ಬಂದಿದ್ದೇವೆ. ಚೈನಿಸ್, ತಂದೂರಿ ಇನ್ನಿತರ ಖಾದ್ಯಗಳಗೆ ಬ್ರೇಕ್ ಹಾಕಬೇಕೆಂದುಕೊಂಡಿದ್ದೇವೆ. ಮೆನುವಿನಲ್ಲಿ ಬದಲಾವಣೆ ಮಾಡಲು ಚಿಂತನೆ‌ ನಡೆದಿದೆ” ಎಂದು ಹೇಳಿದರು.

 

Leave a Reply

Your email address will not be published. Required fields are marked *

error: Content is protected !!