ಉದಯವಾಹಿನಿ,ಹೊಸ ದಿಲ್ಲಿ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾರಥ್ಯದ ಕೇಂದ್ರ ಸರ್ಕಾರವು ಯೋಗಕ್ಕೆ ವಿಶ್ವ ಮಟ್ಟದಲ್ಲಿ ಜನಪ್ರಿಯತೆ ತಂದು ಕೊಟ್ಟಿದೆ ಎಂದು ಶ್ಲಾಘಿಸಿದ್ದಾರೆ. ವಿಶ್ವಾದ್ಯಂತ ಜನರು ಯೋಗಾಭ್ಯಾಸ ಮಾಡಲು, ಯೋಗವನ್ನು ಪ್ರಚಾರ ಮಾಡಲು ಮೋದಿ ಸರ್ಕಾರ ಶ್ರಮಿಸಿದೆ ಎಂದು ತರೂರ್ ಹೇಳಿದ್ದಾರೆ. ಮಾಜಿ ಪ್ರಧಾನಿ ದಿವಂಗತ ಜವಹರ್‌ಲಾಲ್ ನೆಹರೂ ಅವರು ಯೋಗವನ್ನು ಜನಪ್ರಿಯಗೊಳಿಸಲು ಶ್ರಮಿಸಿದ್ದರು. ಭಾರತದ ಪುರಾತನ ಯೋಗ ಪದ್ದತಿಯನ್ನು ಜನಪ್ರಿಯಗೊಳಿಸಿದ ಶ್ರೇಯ ನೆಹರೂ ಅವರಿಗೆ ಸಲ್ಲಬೇಕು ಎಂದು ಕಾಂಗ್ರೆಸ್ ಪಕ್ಷ ತನ್ನ ಪರಿಶೀಲಿಸಿದ ಟ್ವಿಟ್ಟರ್ ಖಾತೆಯಲ್ಲಿ ಮಾಡಿದ್ದ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಶಶಿ ತರೂರ್, ಅದರಲ್ಲಿ ಮೋದಿ ಸರ್ಕಾರದ ಕೊಡುಗೆಯನ್ನು ಕೊಂಡಾಡಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಬುಧವಾರ ಬೆಳಗ್ಗೆಯೇ ಟ್ವೀಟ್ ಮಾಡಿದ್ದ ಕಾಂಗ್ರೆಸ್, ಯೋಗವನ್ನು ಜನಪ್ರಿಯಗೊಳಿಸಲು ನೆಹರೂ ಅವರು ಶ್ರಮಿಸಿದ್ದರು ಎಂದು ಬರೆದುಕೊಂಡಿತ್ತು. ಯೋಗವನ್ನು ರಾಷ್ಟ್ರೀಯ ನೀತಿಯನ್ನಾಗಿ ನೆಹರೂ ಅವರು ರೂಪಿಸಿದ್ದರು. ಭಾರತದ ಈ ಪ್ರಾಚೀನ ಕಲೆಯ ಮಹತ್ವವನ್ನು ನಾವು ಶ್ಲಾಘಿಸಬೇಕು. ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗ ಅತ್ಯುತ್ತಮವಾದದ್ದು. ಯೋಗಾಭ್ಯಾಸದ ಹವ್ಯಾಸವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿ ಟ್ವೀಟಿಸಿದ್ದ ಕಾಂಗ್ರೆಸ್, ನೆಹರೂ ಅವರು ಯೋಗಾಭ್ಯಾಸ ಮಾಡುವ ಫೋಟೋವನ್ನೂ ಜೊತೆಯಲ್ಲೇ ಪ್ರಕಟಿಸಿತ್ತು.
