ಉದಯವಾಹಿನಿ,ಚಿತ್ರದುರ್ಗ: ಚಿತ್ರದುರ್ಗದಲ್ಲಿ ಜಿಲ್ಲೆಯಲ್ಲಿ ಮತ್ತೆ ಮತಾಂತರದ ಕೂಗು ಕೇಳಿ ಬಂದಿದೆ. ಗೂಳಿಹಟ್ಟಿ ಶೇಖರ್ ಬಳಿಕ ಇದೀಗ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಈ ಬಗ್ಗೆ ಧ್ವನಿಯೆತ್ತಿದ್ದು, ಕೇವಲ ಒಂದು ಬಿರಿಯಾನಿಗಾಗಿ ಚಿತ್ರದುರ್ಗದಲ್ಲಿ ಮತಾಂತರ ಪ್ರಕ್ರಿಯಗಳು ನಡೆಯುತ್ತದೆ ಎಂದು ಅವರು ಆರೋಪಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರಕಾರ ಮತಾಂತರ ನಿಷೇಧ ಕಾಯ್ದೆ ವಾಪಸಾತಿ ಬಗ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಆಂಧ್ರಪ್ರದೇಶದಲ್ಲಿ ಶೇ.90ರಷ್ಟು ಮತ್ತು ತೆಲಂಗಾಣದಲ್ಲಿ ಶೇ.30ರಷ್ಟು ಮತಾಂತರ ಪ್ರಕ್ರಿಯೆ ನಡೆದಿದೆ. ಚಿತ್ರದುರ್ಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಮ್ಮ ಮಾದಿಗ ಸಮುದಾಯದ ಜನರನ್ನು ಮತಾಂತರಗೊಳಿಸಲಾಗುತ್ತಿದೆ. ಅವರ ಹಿಂದುಳಿದಿರುವಿಕೆ ಮತ್ತು ಬಡತಲಾ ದುರ್ಲಾಭ ಯಾವ ಮಟ್ಟಿಗೆ ನಡೆಯುತ್ತಿದೆಯೆಂದರೆ ಒಂದು ಬಿರಿಯಾನಿ ಕೊಟ್ಟರೂ ಸಾಕು ಜನ ಮತಾಂತರವಾಗುತ್ತಿದ್ದಾರೆ ಎಂದು ದೂರಿದರು.
ಶೋಷಿತ ಜನರನ್ನೇ ಗುರಿ ಮಾಡಿ ಮತಾಂತರ ಮಾಡಲಾಗುತ್ತಿದೆ. ಮತಾಂತರದಿಂದ ಸಮಾಜದಲ್ಲಿ ಮುನ್ನೆಲೆಗೆ ಬರಲು ಸಾಧ್ಯವಿಲ್ಲ ಎಂಬುದು ತಿಳಿದೇ ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ರಾಜ್ಯ ಸರಕಾರ ಮತಾಂತರ ನಿಷೇಧ ಕಾನೂನನ್ನು ಜಾರಿಗೆ ತಂದಿತ್ತು. ಈಗ ಕಾಂಗ್ರೆಸ್ ಇದರ ವಿರುದ್ಧ ಹೋಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಏಕರೂಪ ನಾಗರಿಕ ಸಂಹಿತೆನ್ನು ಮುಸ್ಲಿಮರೂ ಸ್ವಾಗತಿಸಿದ್ದಾರೆ. ರಾಜ್ಯ ಸರಕಾರವು ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆವ ಮೂಲಕ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ದೇಶಕ್ಕೆ ನೀಡಿದ್ದ ಸಂವಿಧಾನ ವಿರೋಧಿ ಕಾರ್ಯವಾಗುತ್ತದೆ. ಸಂವಿಧಾನವೇ ಪರಮೋಚ್ಚ ಮತ್ತು ಎಲ್ಲಿರಿಂದಲೂ ಗೌರವಿಸಲ್ಪಡಬೇಕು ಎಂದು ಅಂಬೇಡ್ಕರ್ ಅವರು ಬಯಸಿದ್ದರು ಎಂದು ತಿಳಿಸಿದರು.
