ಉದಯವಾಹಿನಿ,  ಶ್ರೀನಗರ: ʻಆಪರೇಷನ್‌ ಮಹಾದೇವ್‌ʼ ಹೆಸರಿನಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಶ್ರೀನಗರದ ಲಿಡ್ವಾಸ್‌ ಪ್ರದೇಶದಲ್ಲಿ ಮೂವರು ವಿದೇಶಿ ಉಗ್ರರನ್ನ ಹತ್ಯೆಗೈದಿವೆ. ಹತ್ಯೆಗೈದ ಮೂವರಲ್ಲಿ ಓರ್ವ ಉಗ್ರ ಪಹಲ್ಗಾಮ್‌ ದಾಳಿಯಲ್ಲಿ ಭಾಗಿಯಾಗಿದ್ದ ಮುಖ್ಯ ಹಂತಕ ಅನ್ನೋದು ಖಚಿತವಾಗಿದೆ.ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ ನರಮೇಧ ನಡೆಸಿದ ಪ್ರಮುಖ ಉಗ್ರ ಹಾಶಿಮ್‌ ಮೂಸಾ ಅಲಿಯಾಸ್‌ ಸುಲೇಮಾನ್‌ ಮೂಸಾನನ್ನ ಹೊಡೆದುರುಳಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಮೂಲಗಳು ಮಾಹಿತಿ ಹಂಚಿಕೊಂಡಿವೆ.

ಹಾಶಿಮ್‌ ಮೂಸಾ ಯಾರು..?: ಹಾಶಿಮ್‌ ಮೂಸಾ ಪಾಕಿಸ್ತಾನ ಸೇನೆಯ ಹಿನ್ನೆಲೆ ಹೊಂದಿದ್ದಾನೆ. ಪಹಲ್ಗಾಮ್ ದಾಳಿಯಲ್ಲಿ ಪಾತ್ರದ ಇರುವುದಕ್ಕೆ ಇದು ಪ್ರಬಲ ಸಾಕ್ಷಿಯಾಗಿದೆ. ಪಾಕಿಸ್ತಾನದ ಪ್ಯಾರಾ ಕಮಾಂಡೊ ಆಗಿದ್ದ ಮೂಸಾ ವಿಶೇಷ ತರಬೇತಿ ಪಡೆದಿದ್ದ. ಲಷ್ಕರ್-ಎ-ತೈಬಾದಲ್ಲೂ ಪ್ರಮುಖನಾಗಿ ಗುರುತಿಸಿಕೊಂಡಿದ್ದ, ಅದಕ್ಕಾಗಿಯೇ ಸ್ಥಳೀಯರಲ್ಲದವರನ್ನ ಕೊಲ್ಲಲು, ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಮೂಸಾನನ್ನ ಭಾರತಕ್ಕೆ ಕಳುಹಿಸಲಾಗಿತ್ತು. ಹಾಶೀಮ್ ಮೂಸಾ LeT ಸಂಘಟನೆಗೆ ಸೇರಿದವನಾಗಿದ್ದು, SSG ಕಮಾಂಡೋ ಯುದ್ಧದಲ್ಲಿ ಪರಿಣತಿ ಹೊಂದಿದ್ದ ಎಂದು ತಿಳಿದುಬಂದಿದೆ.

ಮೂವರು ವಿದೇಶಿ ಉಗ್ರರ ಹತ್ಯೆ: ಸೇನೆಯ ಹಿರಿಯ ಅಧಿಕಾರಿಗಳ ಪ್ರಕಾರ, ಆಪರೇಷನ್‌ ಮಹಾದೇವ್‌ ಕಾರ್ಯಾಚರಣೆಯಲ್ಲಿ ಹಾಶಿಮ್‌ ಮೂಸಾ ಸೇರಿ ಮೂವರು ಉಗ್ರರನ್ನ ಹತ್ಯೆಗೈಯಲಾಗಿದೆ. ಸೇನೆಯ ಚಿನಾರ್ ಕಾರ್ಪ್ಸ್ ನೇತೃತ್ವದಲ್ಲಿ ಮತ್ತು ಜಮ್ಮು ಮತ್ತು ಕಾಶ್ಮೀರ (Jammu And Kashmir) ಪೊಲೀಸರೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನ ಹತ್ಯೆಗೈಯಲಾಗಿದೆ. ಲಿಡ್ವಾಸ್‌ನ ದಚಿಗಮ್ ಶ್ರೀನಗರದ ಹೊರವಲಯದಲ್ಲಿರುವ ದಟ್ಟ ಅರಣ್ಯ ಪ್ರದೇಶವಾಗಿದೆ. ಇಲ್ಲಿನ ಬೆಟ್ಟದ ದುರ್ಗಮ ಹಾದಿಯು ಟ್ರಾಲ್‌ಗೆ ಸಂಪರ್ಕ ಕಲ್ಪಿಸುತ್ತದೆ. ಈ ಪ್ರದೇಶದಲ್ಲಿ‌ ಹಿಂದೆಯೂ ಟಿಆರ್‌ಎಫ್‌‌ ಉಗ್ರ ಸಂಘಟನೆಯ ಚಟುವಟಿಕೆಗಳು ನಡೆಯುತ್ತಿತ್ತು ಎಂದು ವರದಿಗಳು ತಿಳಿಸಿವೆ.

 

Leave a Reply

Your email address will not be published. Required fields are marked *

error: Content is protected !!