ಉದಯವಾಹಿನಿ, ಹೈದರಾಬಾದ್: ಶಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಹೃದಯಾಘಾತಗೊಂಡು 25 ವರ್ಷದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಹೈದರಾಬಾದ್‌ನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ರಾಕೇಶ್ ನಾಗೋಲೆ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ 8 ಗಂಟೆಯ ವೇಳೆಗೆ ಸ್ನೇಹಿತರ ಜೊತೆ ಡಬಲ್ಸ್ ಆಡುತ್ತಿದ್ದರು. ಈ ವೇಳೆ ಶಟಲ್ ಕಾಕ್ ತೆಗೆದುಕೊಳ್ಳಲು ಬಾಗಿದ ಕೆಲ ಕ್ಷಣಗಳಲ್ಲಿ ಕುಸಿದು ಬಿದ್ದಿದ್ದಾರೆ.
ತಕ್ಷಣ ಸಹ ಆಟಗಾರರು ರಾಕೇಶ್ ಬಳಿ ಬಂದಿದ್ದಾರೆ. ರಾಕೇಶ್ ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟು ಹೊತ್ತಿಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ರಾಕೇಶ್ ಕುಸಿದು ಬೀಳುತ್ತಿರುವ ಸಿಸಿಟಿವಿ ದೃಶ್ಯ ವೈರಲ್ ಆಗಿದೆ. ಹೃದಯದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯಲು ಆರೋಗ್ಯ ತಪಾಸಣೆ ಮಾಡುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
