ಉದಯವಾಹಿನಿ, ದೇಶಾದ್ಯಂತ ನಾಗಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ನಾಗಪಂಚಮಿ ಆಚರಿಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಸರ್ಪಗಳನ್ನು ಶಿವನ ಆಭರಣ ಎಂದು ಪರಿಗಣಿಸಲಾಗಿದೆ. ನಾಗದೇವರಿಗೆ ಭಕ್ತರು ಹಾಲೆರೆದು, ಪೂಜೆ-ಪುನಸ್ಕಾರಗಳ ಮೂಲಕ ಹಬ್ಬ ಆಚರಿಸುತ್ತಾರೆ. ಶಿವಲಿಂಗ ಪೂಜೆ ಕೂಡ ನೆರವೇಸುತ್ತಾರೆ. ದೇವಾಲಯಗಳಿಗೆ ಭೇಟಿ ನೀಡಿ ಭಕ್ತಿ-ಭಾವ ಮೆರೆಯುತ್ತಾರೆ. ಭಾರತದಲ್ಲಿ ಅನೇಕ ಸರ್ಪ ದೇವಾಲಯಗಳಿವೆ. ಅವುಗಳಲ್ಲಿ ಒಂದು ಉಜ್ಜಯಿನಿಯ (Ujjain) ನಾಗಚಂದ್ರೇಶ್ವರ ದೇವಾಲಯ ಇದು ಪ್ರಸಿದ್ಧ ಮಹಾಕಾಳ ದೇವಾಲಯದ ಮೂರನೇ ಮಹಡಿಯಲ್ಲಿದೆ. ಈ ದೇವಾಲಯವು ವರ್ಷಕ್ಕೊಮ್ಮೆ ನಾಗಪಂಚಮಿಯಂದು ಮಾತ್ರ 24 ಗಂಟೆಗಳ ಕಾಲ ತೆರೆದಿರುತ್ತದೆ.
ಈ ದೇವಾಲಯದಲ್ಲಿ ನಾಗರಾಜ ತಕ್ಷಕ ಸ್ವತಃ (ನಾಗರ ರಾಜ) ವಾಸಿಸುತ್ತಾನೆ ಎಂದು ನಂಬಲಾಗಿದೆ. ನಾಗಚಂದ್ರೇಶ್ವರ ದೇವಾಲಯದಲ್ಲಿ 11 ನೇ ಶತಮಾನದ ಅದ್ಭುತ ಪ್ರತಿಮೆಯಿದೆ. ಇದರಲ್ಲಿ ಶಿವ ಮತ್ತು ಪಾರ್ವತಿಯರು ಹೆಡೆ ಬಿಚ್ಚಿದ ಹಾವಿನ ಆಸನದ ಮೇಲೆ ಕುಳಿತಿರುವ ಭಂಗಿ ಇದೆ. ಈ ಪ್ರತಿಮೆಯನ್ನು ನೇಪಾಳದಿಂದ ಇಲ್ಲಿಗೆ ತರಲಾಗಿದೆ ಎಂದು ಹೇಳಲಾಗುತ್ತದೆ. ಉಜ್ಜಯಿನಿ ಹೊರತುಪಡಿಸಿ, ಜಗತ್ತಿನಲ್ಲಿ ಎಲ್ಲಿಯೂ ಅಂತಹ ಪ್ರತಿಮೆ ಇಲ್ಲ. ಅದರ ದರ್ಶನಕ್ಕಾಗಿ, ಸೋಮವಾರ ರಾತ್ರಿ 12 ಗಂಟೆಗೆ ದೇವಾಲಯದ ದ್ವಾರಗಳನ್ನು ತೆರೆಯಲಾಗುತ್ತದೆ. ಮಂಗಳವಾರ ಮಧ್ಯರಾತ್ರಿ 12 ಗಂಟೆಗೆ, ದೇವಾಲಯದ ಬಾಗಿಲುಗಳನ್ನು ಮತ್ತೆ ಒಂದು ವರ್ಷದವರೆಗೆ ಮುಚ್ಚಲಾಗುತ್ತದೆ.
