ಉದಯವಾಹಿನಿ, ಮಾಸ್ಕೋ: ಕಮ್ಚಟ್ಕಾ ದ್ವೀಪದಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ಬೆನ್ನಲ್ಲೇ ರಷ್ಯಾದ ತೀರ ಪ್ರದೇಶಗಳಲ್ಲಿ ಭಾರೀ ಎತ್ತರದ ಅಲೆಗಳು ಕಾಣಲು ಆರಂಭಿಸಿದೆ.ಬಂದರು ಪ್ರದೇಶ ಸೆವೆರೊ-ಕುರಿಲ್ಸ್ಕ್‌ಗೆ ಸುನಾಮಿ ಅಲೆಗಳು ಅಪ್ಪಳಿಸುತ್ತಿರುವ ವೈಮಾನಿಕ ದೃಶ್ಯಾವಳಿಗಳನ್ನು ರಷ್ಯನ್ ಅಕಾಡೆಮಿ ಆಫ್ ಸೈನ್ಸಸ್ ಬಿಡುಗಡೆ ಮಾಡಿದೆ.
ಕಮ್ಚಟ್ಕಾ ದ್ವೀಪದ ಪೆನಿನ್ಸುಲಾದಲ್ಲಿರುವ ಪೆಟ್ರೋಪಾವ್ಲೋವ್ಸಕ್ ನಿಂದ ಸುಮಾರು 136 ಕಿಲೋಮೀಟರ್ ದೂರದ 19 ಕಿಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ. ಇದು 1952ರ ಬಳಿಕ ಸಂಭವಿಸಿದ ಅತೀ ಪ್ರಬಲ ಭೂಕಂಪವಾಗಿದೆ. ಅಮೆರಿಕದ ಅಲಾಸ್ಕಾದ ಭಾಗಗಳು ಹಾಗೂ ಜಪಾನ್‌ಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಬಂದರು ಪಟ್ಟಣವಾಗಿರುವ ಸೆವೆರೊ-ಕುರಿಲ್ಸ್ಕ್ ಕೆಲ ಭಾಗಗಳು ಈಗ ಸಮದ್ರ ನೀರಿನಲ್ಲಿ ಮುಳುಗಡೆಯಾಗಿದ್ದು, ಸುಮಾರು 2,000 ಜನರನ್ನು ಸ್ಥಳಾಂತರ ಮಾಡಲಾಗಿದೆ. ಸುನಾಮಿ ಪೀಡಿತ ಪ್ರದೇಶಗಳಲ್ಲಿ ಜನರು ಸಮುದ್ರಕ್ಕೆ ತೆರಳದಂತೆ ಧ್ವನಿವರ್ಧಕದ ಮೂಲಕ ಪ್ರಕಟಣೆಯನ್ನು ಹೊರಡಿಸಲಾಗಿದೆ.
