ಉದಯವಾಹಿನಿ, ನವದೆಹಲಿ: ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಟ್ಟೂಬಿಡದಂತೆ ಕಾಡಿದ್ದ ಪಿಎಸ್‌‍ಐ ಹಗರಣ ಹಾಗೂ ಕೆಇಎ ನೇಮಕಾತಿ ಪರೀಕ್ಷೆ ಬರೆಯಲು ಹಣ ಪಡೆದು ಬ್ಲೂಟೂತ್‌ ನೀಡಿದ ಪ್ರಮುಖ ಆರೋಪಿ ಆರ್‌.ಡಿ.ಪಾಟೀಲ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ.ಆರೋಪಿ ಪಾಟೀಲಗೆ ಜಾಮೀನು ನೀಡಲು ಹೈಕೋರ್ಟ್‌ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್‌ಗೆ ವಿಶೇಷ ಮೇಲ ನವಿ ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿಯನ್ನು ನ್ಯಾಯಪೀಠ ಈ ಹಿಂದೆ ವಜಾಗೊಳಿಸಿತ್ತು. ಆ ಬಳಿಕ, ವೈದ್ಯಕೀಯ ಕಾರಣ ನೀಡಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವರದಿ ನೀಡುವಂತೆ ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸೂಚಿಸಿತ್ತು. ಆರೋಪಿಗೆ ಶಸ್ತ್ರಚಿಕಿತ್ಸೆಯ ಅಗತ್ಯ ಇಲ್ಲ ಎಂದು ಸಂಸ್ಥೆ ವರದಿ ನೀಡಿತ್ತು.
ಪಿಎಸ್‌‍ಐ ಅಕ್ರಮ ನೇಮಕಾತಿ ಹಗರಣದ ಸಂಬಂಧ ಹೈಕೋರ್ಟ್‌ನ ಕಲಬುರಗಿ ಪೀಠದಿಂದ ಷರತ್ತುಬದ್ಧ ಜಾಮೀನು ಪಡೆದಿದ್ದ ಪಾಟೀಲ ಬಿಡುಗಡೆಯಾದ ದಿನದಿಂದಲೇ ನಾಪತ್ತೆಯಾಗಿದ್ದ. ಸಿಐಡಿ ಪೊಲೀಸರು ಹಲವು ನೋಟಿಸ್‌‍ ಜಾರಿಗೊಳಿಸಿದ್ದರೂ ಹಾಜರು ಆಗಿರಲಿಲ್ಲ. ಕೆಲ ದಿನಗಳ ಬಳಿಕ ಹಾಜರಾಗಿದ್ದ ಕೆಇಎ ಪ್ರಕರಣದಲ್ಲೂ ತಲೆಮರೆಸಿಕೊಂಡಿದ್ದ.

19ಕ್ಕೂ ಹೆಚ್ಚು ಪ್ರಕರಣ ದಾಖಲು: ಪಿಎಸ್‌‍ಐ ಹಗರಣ, ಕೆಇಎ ಬ್ಲೂಟೂತ್‌ ಅಕ್ರಮ, ಕೌಟುಂಬಿಕ ಪ್ರಕರಣಗಳು ಸೇರಿ ಆರ್‌.ಡಿ.ಪಾಟೀಲ ವಿರುದ್ಧ 19ಕ್ಕೂ ಹೆಚ್ಚು ಪ್ರಕರಣಗಳು ರಾಜ್ಯದ ವಿವಿಧ ಪೊಲೀಸ್‌‍ ಠಾಣೆಗಳಲ್ಲಿ ದಾಖಲಾಗಿದ್ದವು.
ಏನಿದು ಪ್ರಕರಣ:ಕರ್ನಾಟಕ ರಾಜ್ಯ ಪೊಲೀಸ್‌‍ ಇಲಾಖೆಯ 545 ಪೊಲೀಸ್‌‍ ಸಬ್‌ಇನ್‌ಸ್ಪೆಪೆಕ್ಟರ್‌ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವಿದೆ. 2021ರ ಅಕ್ಟೋಬರ್‌ 3ರಂದು 545 ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಆದರೆ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಅಭ್ಯರ್ಥಿಗಳು ಆರೋಪ ಮಾಡಿ ದೂರು ನೀಡಿದ್ದರು. ಪಿಎಸ್‌‍ಐ ಪರೀಕ್ಷೆಯಲ್ಲಿ 21 ಪ್ರಶ್ನೆಗಳಿಗೆ ಉತ್ತರಿಸಿದ ಅಭ್ಯರ್ಥಿ 100 ಅಂಕಗಳನ್ನು ಪಡೆದಿದ್ದರು. ಖಾಲಿ ಒಎಂಆರ್‌ ಶೀಟ್‌ಗಳನ್ನು ನಂತರ ಭರ್ತಿ ಮಾಡಲಾಗಿದೆ ಎಂಬ ಆರೋಪವೂ ಇದೆ.
ಉತ್ತರ ಕರ್ನಾಟಕದ ಭಾಗದ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಇಲ್ಲದೆ ಇದ್ದಿದ್ದು, ಬ್ಲೂಟೂಥ್‌ ಬಳಸಿಕೊಂಡು ಪರೀಕ್ಷೆ ಬರೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ಪ್ರಕರಣದ ಸ್ವರೂಪ ತೀವ್ರಗೊಂಡ ಬಳಿಕ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು.

Leave a Reply

Your email address will not be published. Required fields are marked *

error: Content is protected !!