ಉದಯವಾಹಿನಿ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರು, ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಆಪ್ತ ಸಮಾಲೋಚನೆಯನ್ನು 2ನೇ ದಿನವೂ ಮುಂದುವರೆಸಿ ಇಂದು ಬೀದರ್‌ ಜಿಲ್ಲೆಯ ಸಚಿವರು, ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ.ಬೀದರ್‌ ಜಿಲ್ಲೆಯಲ್ಲಿ ಕಾಂಗ್ರೆಸ್‌‍ ವತಿಯಿಂದ ಈಶ್ವರ್‌ ಖಂಡ್ರೆ ಮತ್ತು ರಹೀಂಖಾನ್‌ ವಿಧಾನಸಭೆಯ ಸದಸ್ಯರಾಗಿದ್ದು, ಇಬ್ಬರೂ ಸಚಿವರಾಗಿದ್ದಾರೆ. ಡಾ.ಚಂದ್ರಶೇಖರ್‌ ಬಸವರಾಜಪಾಟೀಲ್‌ ವಿಧಾನಪರಿಷತ್‌ ಸದಸ್ಯರಾಗಿದ್ದು, ಸಭೆಗೆ ವಿಧಾನಪರಿಷತ್‌ ಸದಸ್ಯರಿಗೆ ಆಹ್ವಾನ ಇಲ್ಲದಿದ್ದರಿಂದ ಅವರು ದೂರ ಉಳಿದಿದ್ದರು. ಎರಡನೇ ದಿನವಾದ ಇಂದು ಮುಖ್ಯಮಂತ್ರಿಯವರು ಬೆಳಿಗ್ಗೆ ಮೊದಲ ಹಂತದಲ್ಲಿ ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಸೇರಿ 7 ಜಿಲ್ಲೆಗಳ ಶಾಸಕರು, ಸಚಿವರ ಜೊತೆ ಚರ್ಚೆ ನಡೆಸಿದರೆ ಮಧ್ಯಾಹ್ನದ ಬಳಿಕ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಶಾಸಕರುಗಳ ಜೊತೆ ಚರ್ಚೆ ನಡೆಸಿದ್ದಾರೆ.

ತೀವ್ರ ವಿವಾದದ ನಡುವೆಯೂ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಸಭೆಯಿಂದ ದೂರ ಇಡಲಾಗಿದೆ. ಡಿಕೆಶಿ ಬೆಂಗಳೂರಿನಲ್ಲೇ ಇದ್ದರೂ ಸಭೆಗೆ ಹಾಜರಾಗಲಿಲ್ಲ. ಅದರಲ್ಲೂ ಪ್ರಮುಖವಾಗಿ ಬೀದರ್‌ ಜಿಲ್ಲೆಯ ಕಾಂಗ್ರೆಸ್‌‍ನಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ವಿಧಾನಪರಿಷತ್‌ ಸದಸ್ಯ ಚಂದ್ರಶೇಖರ್‌ ಪಾಟೀಲ್‌, ರಾಜಶೇಖರ್‌ ಬಸವರಾಜ್‌ ಹಿಟ್ನಾಳ್‌ರವರ ನೇತೃತ್ವದಲ್ಲಿ ಜಿಲ್ಲೆಯ ಕಾಂಗ್ರೆಸ್‌‍ ಮುಖಂಡರು ಸಚಿವ ಈಶ್ವರ್‌ ಖಂಡ್ರೆ ವಿರುದ್ಧ ಬಹಿರಂಗ ಆಕ್ರೋಶಗಳನ್ನು ವ್ಯಕ್ತಪಡಿಸಿದ್ದರು.
ಅವರೊಂದಿಗೆ ಡಿಕೆಶಿ ಸಂಧಾನ ಮಾತುಕತೆ ನಡೆಸಿ ಸಮಾಧಾನ ಪಡಿಸಿದ್ದರು. ಆದರೂ ಆಂತರಿಕ ಬೇಗುದಿ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಲೇ ಇದೆ.ಇಂದಿನ ಸಭೆಯಲ್ಲಿ ಮುಖ್ಯಮಂತ್ರಿಯವರು ಸಚಿವರು ಹಾಗೂ ಶಾಸಕರ ಜೊತೆ ಮಾತ್ರ ಚರ್ಚೆ ನಡೆಸಿದ್ದು, ಭಿನ್ನಮತ ಪೂರ್ಣವಾಗಿ ಶಮನವಾದಂತಿಲ್ಲ. ಡಿಕೆಶಿಯವರು ಸಭೆಯಲ್ಲಿ ಭಾಗವಹಿಸದೇ ಇದ್ದುದರಿಂದ ಏಕಮುಖವಾದ ಚರ್ಚೆಗಳಾಗಿರುವ ಶಂಕೆ ವ್ಯಕ್ತವಾಗಿದೆ.ಕಲಬುರಗಿ ಜಿಲ್ಲೆಯಲ್ಲೂ ಶಾಸಕರು ಅಸಮಾಧಾನಗೊಂಡಿದ್ದಾರೆ. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ವಿರುದ್ಧ ಅಸಹನೆ ವ್ಯಕ್ತಪಡಿಸಿದ್ದರು. ಬೆಳಗಾವಿ ಜಿಲ್ಲೆಯ ಭಿನ್ನಮತವಂತೂ ಇಡೀ ರಾಜ್ಯಕ್ಕೆ ಜನಜನಿತವಾಗಿದೆ.ಮುಖ್ಯಮಂತ್ರಿಯವರು ಕ್ಷೇತ್ರವಾರು ಬಿಡುಗಡೆ ಮಾಡುವ 50 ಕೋಟಿ ರೂ.ಗಳ ಅನುದಾನದ ಬಳಕೆಗೆ ಸೀಮಿತವಾಗಿ ಸಭೆ ನಡೆಸಲಿದ್ದಾರೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ಶಾಸಕರು, ಸಚಿವರ ಸಭೆಯಲ್ಲಿ ಜಿಲ್ಲೆಯ ಭಿನ್ನಮತಗಳ ಬಗ್ಗೆ ಸಮಾಲೋಚನೆಗಳಾಗುತ್ತಿವೆ. ಪರಸ್ಪರ ಒಗ್ಗಟ್ಟಿನಿಂದ ಮುನ್ನಡೆಯುವಂತೆ ಮುಖ್ಯಮಂತ್ರಿ ಸೂಚನೆ ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!