ಉದಯವಾಹಿನಿ, ಬೀಜಿಂಗ್: ಹಠಾತ್ ಪ್ರವಾಹ ಉಂಟಾಗಿ, ಚಿನ್ನದ ಅಂಗಡಿಯಿಂದ ಸುಮಾರು 20 ಕೆ.ಜಿಗಳಷ್ಟು ಚಿನ್ನ ಮತ್ತು ಬೆಳ್ಳಿ ಆಭರಣಗಳು ಕೊಚ್ಚಿ ಹೋದ ಘಟನೆ ನಡೆದಿದೆ. ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿರುವ ವುಕಿ ಕೌಂಟಿಯಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಜುಲೈ 25ರ ಬೆಳಗ್ಗೆ ಸಂಭವಿಸಿದ ಈ ಘಟನೆಯಿಂದ, ಅಂಗಡಿ ಸಿಬ್ಬಂದಿ ಮತ್ತು ನಿವಾಸಿಗಳು ಕಾಣೆಯಾದ ಬೆಲೆಬಾಳುವ ವಸ್ತುಗಳನ್ನು ಹುಡುಕಾಟ ನಡೆಸಿದ್ದಾರೆ.
ಸಿಬ್ಬಂದಿ ಎಂದಿನಂತೆ ಅಂಗಡಿ ತೆರೆಯಲು ಆಗಮಿಸುತ್ತಿದ್ದಂತೆ ಲಾವೊಫೆಂಗ್‌ಕ್ಸಿಯಾಂಗ್ ಎಂಬ ಆಭರಣ ಅಂಗಡಿಗೆ ಹಾನಿಯಾಯಿತು. ಅಂಗಡಿಯ ಮಾಲೀಕ ಯೆ ಪ್ರಕಾರ, ಸಿಬ್ಬಂದಿ ಆಭರಣಗಳನ್ನು ತಿಜೋರಿಗೆ ಸ್ಥಳಾಂತರಿಸಲಿಲ್ಲ. ಆ ದಿನ ಬೆಳಗ್ಗೆ ಪ್ರವಾಹದ ಎಚ್ಚರಿಕೆಗಳನ್ನು ನೀಡಿದಾಗ, ಎಲ್ಲಾ ಆಭರಣಗಳು ಇನ್ನೂ ಪ್ರದರ್ಶನದಲ್ಲಿದ್ದವು. ಕೆಲವೇ ನಿಮಿಷಗಳಲ್ಲಿ, ಮುಂಭಾಗದ ಪ್ರವೇಶದ್ವಾರದ ಮೂಲಕ ನೀರು ಉಕ್ಕಿ ಒಂದು ಮೀಟರ್‌ಗಿಂತಲೂ ಹೆಚ್ಚು ಏರಿತು. ಹೆಚ್ಚಿದ ಪ್ರವಾಹವು ಅಂಗಡಿಯೊಳಗೆ ನುಗ್ಗಿ ಆಭರಣಗಳಿಂದ ತುಂಬಿದ ಕ್ಯಾಬಿನೆಟ್‌ಗಳು ಮತ್ತು ಟ್ರೇಗಳನ್ನು ಕೊಚ್ಚಿಕೊಂಡು ಹೋಯಿತು. ವಸ್ತುಗಳಲ್ಲಿ ಚಿನ್ನದ ಹಾರಗಳು, ಬಳೆಗಳು, ಉಂಗುರಗಳು, ಕಿವಿಯೋಲೆಗಳು, ಪೆಂಡೆಂಟ್‌ಗಳು, ವಜ್ರದ ಉಂಗುರಗಳು ಮತ್ತು ಬೆಳ್ಳಿ ಆಭರಣಗಳು ಸೇರಿವೆ. ಹೊಸ ದಾಸ್ತಾನು, ಮರುಬಳಕೆಯ ಚಿನ್ನ ಮತ್ತು ದೊಡ್ಡ ಪ್ರಮಾಣದ ನಗದು ಇದ್ದ ಅಂಗಡಿಯ ತಿಜೋರಿಯೂ ಕಾಣೆಯಾಗಿದೆ.
ಪ್ರಸ್ತುತ ಮಾರುಕಟ್ಟೆ ಬೆಲೆಗಳ ಆಧಾರದ ಮೇಲೆ, ಕೊಚ್ಚಿ ಹೋಗಿರುವ ವಸ್ತುಗಳ ಒಟ್ಟು ಮೌಲ್ಯ 10 ಮಿಲಿಯನ್ ಯುವಾನ್ (ಸುಮಾರು 12 ಕೋಟಿ ರೂ.) ಮೀರಿದೆ ಎಂದು ಅಂದಾಜಿಸಲಾಗಿದೆ. ಪ್ರವಾಹದ ನಂತರ ಅಂಗಡಿ ಮಾಲೀಕ ಮತ್ತು ಸಿಬ್ಬಂದಿ ಎರಡು ದಿನಗಳ ಕಾಲ ಆ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ. ಇಲ್ಲಿಯವರೆಗೆ, ಅವರು ಸುಮಾರು ಒಂದು ಕೆಜಿ ಆಭರಣಗಳನ್ನು ಮರುಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವು ವಸ್ತುಗಳನ್ನು ನಿವಾಸಿಗಳು ಸ್ವಯಂಪ್ರೇರಣೆಯಿಂದ ಹಿಂತಿರುಗಿಸಿದ್ದಾರೆ.
ಅಂಗಡಿಯ ಸಿಸಿಟಿವಿ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತಿರಲಿಲ್ಲ ಮತ್ತು ಪ್ರವಾಹದ ಸಮಯದಲ್ಲಿ ವಿದ್ಯುತ್ ಕಡಿತಗೊಂಡಿದ್ದವು. ಇದರಿಂದಾಗಿ ಬೆಲೆಬಾಳುವ ವಸ್ತುಗಳು ಹೇಗೆ ಕೊಚ್ಚಿ ಹೋದವು ಅಥವಾ ಯಾರು ಅವುಗಳನ್ನು ಎತ್ತಿಕೊಂಡು ಹೋಗಿರಬಹುದು ಎಂಬುದನ್ನು ಪತ್ತೆಹಚ್ಚುವುದು ಕಷ್ಟಕರವಾಗಿದೆ.ಇನ್ನು ಸುದ್ದಿ ಹರಡಿದ ಕೂಡಲೇ ನಿವಾಸಿಗಳು ಕಳೆದುಹೋದ ವಸ್ತುಗಳನ್ನು ಹುಡುಕಲು ಆ ಪ್ರದೇಶಕ್ಕೆ ಧಾವಿಸಲಾರಂಭಿಸಿದರು. ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ಚಿತ್ರಗಳು ಮತ್ತು ವಿಡಿಯೊಗಳಲ್ಲಿ, ಜನರು ಆಭರಣಗಳನ್ನು ಹುಡುಕಲು ಮಣ್ಣಿನ್ನು ಕೈಯಿಂದಲೇ ಅಗೆಯುವುದನ್ನು ನೋಡಬಹುದು. ಕೆಲವರು ಲೋಹದ ಶೋಧಕಗಳನ್ನು ಸಹ ಬಳಸಿದ್ದಾರೆ.
