
ಉದಯವಾಹಿನಿ, ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವ ಸಂಬಂಧ ಆಗಸ್ಟ್ 5ರಂದು ಕಾಂಗ್ರೆಸ್ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಷ್ಟ್ರಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳಲಾಗಿದೆ. ಈ ಪ್ರತಿಭಟನೆಗೆ ಮಂಡ್ಯ ಜಿಲ್ಲೆಯಿಂದ 5 ಸಾವಿರ ಜನರು ಬರಬೇಕೆಂದು ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಮತಗಳ್ಳತನವಾಗಿರುವ ಸಂಬಂಧ ಈಗಾಗಲೇ ಅಭಿಪ್ರಾಯ ವ್ಯಕ್ತಪಡಿಸಿ, ಉದಯಪುರ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ಸಂಶೋಧನೆ ನಡೆಸಲಾಗಿ ಸಾಬೀತಾದ ಕಾರಣದಿಂದ ಪ್ರತಿಭಟನೆಯ ಮೂಲಕ ರಾಷ್ಟ್ರವ್ಯಾಪಿ ಜಾಗೃತಿ ಮೂಡಿಸಲಾಗುವುದು ಎಂದರು. ಉದಯಪುರ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ಸಂಶೋಧನೆ ಆಧಾರದ ಮೇಲೆ ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ದೂರು ಸ್ವೀಕರಿಸದ ಕಾರಣ ಪ್ರತಿಭಟನೆಯ ಮೂಲಕ ಚುನಾವಣಾ ಆಯೋಗದ ವೈಫಲ್ಯ ಹಾಗೂ ಕೇಂದ್ರಾಡಳಿತದ ಬಿಜೆಪಿ ಚುನಾವಣಾ ಆಯೋಗದ ದುರುಪಯೋಗವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.
