ಉದಯವಾಹಿನಿ, ಬೀದರ್: ಜಿಲ್ಲೆಯಲ್ಲಿ ಕಳೆದ 6 ವರ್ಷಗಳಲ್ಲಿ ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡಿ ಅತೀ ಹೆಚ್ಚು ಸಂಚಾರ ನಿಮಯ ಉಲ್ಲಂಘಿಸಿದ್ದಾರೆ. ಈ ಮೂಲಕ ಬೀದರ್ ಸಂಚಾರಿ ಪೊಲೀಸರು ಬರೋಬ್ಬರಿ 9.73 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ.
ಸಂಚಾರಿ ಪೊಲೀಸರು ರಸ್ತೆ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದರೂ ಕೂಡ ವಾಹನ ಸವಾರರು ಮಾತ್ರ ಸಂಚಾರಿ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ದಂಡದ ಮೊತ್ತ ಸಾವಿರ ದಾಟಿದರೂ ಸವಾರರ ಬೇಜವಾಬ್ದಾರಿ ಮಾತ್ರ ಕಡಿಮೆಯಾಗಿಲ್ಲ, ಹೆಲ್ಮೆಟ್ ಧರಿಸದ ಪ್ರಕರಣಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ದಂಡ ವಸೂಲಾತಿಯ ಪ್ರಮಾಣ ಇಳಿಕೆಯಾಗಿದೆ.
ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಒಟ್ಟು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸದೆ ಇರೋ ಪ್ರಕರಣಗಳೇ ಸಿಂಹಪಾಲಾಗಿದೆ. ಪೊಲೀಸರು ನಿರಂತರ ಜಾಗೃತಿ ಮೂಡಿಸುತ್ತಿರುವ ಪರಿಣಾಮ ದಂಡದ ಮೊತ್ತ ಇಳಿಕೆಯಾಗಿದ್ದು, ಆದರೂ ಸವಾರರು ಮಾತ್ರ ತಲೆಗೆ ಹೆಲ್ಮೆಟ್ ಧರಿಸಲು ಇನ್ನೂ ಮೀನಾಮೇಷ ಎಣಿಸುತ್ತಿರುವುದು ವಿಪರ್ಯಾಸವಾಗಿದೆ. ಜಿಲ್ಲಾ ಪೊಲೀಸ್ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಕಳೆದ ಆರು ವರ್ಷಗಳಲ್ಲಿ ಜಿಲ್ಲೆಯ ವಾಹನ ಸವಾರರು ಬರೋಬರಿ 9.73 ಕೋಟಿ ರೂ.ಗಳಿಗೂ ಅಧಿಕ ದಂಡ ಪಾವತಿ ಮಾಡಿರುವುದು ಗಮನಾರ್ಹವಾಗಿದೆ. ಇದರಲ್ಲಿ ಹೆಲ್ಮೆಟ್ ರಹಿತ ಚಾಲನೆ ಮಾಡಿರುವ ಪ್ರಕರಣಗಳು ಹೆಚ್ಚಾಗಿದೆ. ಯುವಜನತೆ ನಗರದಲ್ಲಿ ಸಿಗ್ನಲ್ ಪಾಲಿಸದೆ ಹೋಗುವುದು, ರಸ್ತೆಗಳಲ್ಲಿ ಅತೀ ವೇಗವಾಗಿ ವಾಹನ ಚಲಾಯಿಸುವುದು, ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳಲ್ಲೂ ದಂಡಕ್ಕೆ ಗುರಿಯಾಗುತ್ತಿದ್ದಾರೆ. ದಂಡ ಕಟ್ಟುವುದು ಬರೀ ಹಣದ ನಷ್ಟವಲ್ಲ, ಇದು ಪ್ರಾಣಾಪಾಯದ ಎಚ್ಚರಿಕೆ ಎಂಬ ಭಾವನೆ ಸವಾರದಲ್ಲಿ ಮೂಡುತ್ತಿಲ್ಲ.
