ಉದಯವಾಹಿನಿ, ಬೆಂಗಳೂರು: ಹೆಣ್ಣು ಕೊಟ್ಟ ಮಾವನನ್ನು ಅಳಿಯ ಕೊಲೆ ಮಾಡಿದರೆ, ಶವವನ್ನು ತಾಯಿ ಮತ್ತು ಮಗಳು ಸುಟ್ಟು ಹಾಕಿರುವಂತಹ ಹೃದಯ ವಿದ್ರಾವಕ ಘಟನೆಯೊಂದು ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ದೇವನಹಳ್ಳಿ ಮೂಲದ ಬಾಬು (48) ಅಳಿಯನಿಂದಲೇ ಕೊಲೆಯಾದ ಮಾವ. ಅಳಿಯ ರಾಮಕೃಷ್ಣ ಹಾಗೂ ಬಾಬು ಅವರ ಪತ್ನಿ ಮುನಿರತ್ನ ಮತ್ತು ಪುತ್ರಿಯಿಂದ ಕೃತ್ಯವೆಸಗಲಾಗಿದ್ದು, ಸದ್ಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಹಲವು ವರ್ಷದಿಂದ ಕಾಡುಗೋಡಿಯಲ್ಲಿ ಈ ಕುಟುಂಬ ವಾಸವಿದೆ. ಗೋದಾಮು ಒಂದರಲ್ಲಿ ಬಾಬು ಕೆಲಸ ಮಾಡಿಕೊಂಡಿದ್ದರು. ಈ ನಡುವೆ ಬಾಬು ಪುತ್ರಿ 3 ತಿಂಗಳ ಹಿಂದೆ ರಾಮಕೃಷ್ಣನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಈ ಮದುವೆ ಬಾಬುಗೆ ಇಷ್ಟವಿರಲಿಲ್ಲ.
ಜು. 26ರಂದು ತವರು ಮನೆಗೆ ಮಗಳು ಹಾಗೂ ಅಳಿಯ ರಾಮಕೃಷ್ಣ ಬಂದಿದ್ದಾರೆ.ಆ ಸಂದರ್ಭದಲ್ಲಿ ಮೊದಲೇ ಮಗಳ ಮೇಲೆ ಬೇಸರಗೊಂಡಿದ್ದ ಬಾಬು ಅವರು ಬಾಯಿಗೆ ಬಂದಂತೆ ಬೈದಿದ್ದಾರೆ. ಗಲಾಟೆ ವೇಳೆ ಪತ್ನಿ ಮುನಿರತ್ನ ಅವರ ಕಪಾಳಕ್ಕೂ ಹೊಡೆದಿದ್ದರು. ಇದರಿಂದ ಕೋಪಗೊಂಡ ಅಳಿಯ ರಾಮಕೃಷ್ಣ ಅತ್ತೆಗೆ ಹೊಡಿಯುತ್ತೀರಾ ಎಂದು ಕಪಾಳಮೋಕ್ಷ ಮಾಡಿದ ಏಟಿಗೆ ಸ್ಥಳದಲ್ಲೇ ಬಾಬು ಮೃತಪಟ್ಟಿದ್ದಾರೆ.
