ಉದಯವಾಹಿನಿ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ದೆಹಲಿ ಪ್ರವಾಸದಲ್ಲಿರುವ ಸಂದರ್ಭದಲ್ಲೇ, ಇತ್ತ ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿಯ ಸಚಿವರು ಮತ್ತು ಶಾಸಕರು ಪ್ರತ್ಯೇಕ ಸಭೆ ನಡೆಸುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ. ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಅವರ ಮನೆಯಲ್ಲಿ ಸಂಜೆ ಪರಿಶಿಷ್ಟ ಜಾತಿಯ ಶಾಸಕರು ಮತ್ತು ಸಚಿವರ ಮಹತ್ವದ ಸಭೆ ನಡೆಯಲಿದ್ದು, ಒಳಮೀಸಲಾತಿ ಕುರಿತಂತೆ ಚರ್ಚೆಗಳಾಗುವ ಸಾಧ್ಯತೆಗಳಿವೆ.ಸುಪ್ರೀಂಕೋಟ್‌ ತೀರ್ಪಿನ ಬಳಿಕ ಒಳಮೀಸಲಾತಿಯ ಜಾರಿಗೆ ರಾಜ್ಯಸರ್ಕಾರ ಮುಂದಾಗಿದೆ. ಈ ಸಂಬಂಧಪಟ್ಟಂತೆ ಸಮರ್ಪಕ ದತ್ತಾಂಶಗಳನ್ನು ಸಂಗ್ರಹಿಸಲು ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ದಾಸ್‌‍ ಅವರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಲಾಗಿದೆ.
ಆಯೋಗ ಮನೆ-ಮನೆ ಸಮೀಕ್ಷೆ ಹಾಗೂ ಆನ್‌ಲೈನ್‌ ಮೂಲಕ ದತ್ತಾಂಶಗಳನ್ನು ಸಂಗ್ರಹಿಸಿದ್ದು, ಇನ್ನೇನು ವರದಿ ನೀಡುವ ಸಾಧ್ಯತೆಯಿದೆ. ಸಮೀಕ್ಷೆ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಬೆಂಗಳೂರಿನಲ್ಲಿ ಶೇ. 35ಕ್ಕೂ ಹೆಚ್ಚಿನ ಜನ ಸಂಖ್ಯೆ ದತ್ತಾಂಶ ನೀಡಿಲ್ಲ ಎಂಬೆಲ್ಲಾ ಆಕ್ಷೇಪಗಳಿವೆ.
ಈ ಮೊದಲು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯ ಬಗ್ಗೆಯೂ ಇದೇ ರೀತಿಯ ಟೀಕೆಗಳಿದ್ದವು. ಈಗ ನ್ಯಾ.ನಾಗಮೋಹನ್‌ದಾಸ್‌‍ ವರದಿಗೆ ಸಂಬಂಧಪಟ್ಟಂತೆಯೂ ಅಪೂರ್ಣ ಮಾಹಿತಿ ಸಂಗ್ರಹವಾಗಿದೆ ಎಂಬ ತಕರಾರುಗಳಿವೆ. ಈ ಹಿನ್ನೆಲೆಯಲ್ಲಿ ಶಾಸಕರುಗಳಿಗೆ ಪೂರ್ಣಪ್ರಮಾಣದ ಮಾಹಿತಿ ನೀಡಲು ಹಾಗೂ ವಾಸ್ತವಾಂಶಗಳನ್ನು ಮನವರಿಕೆ ಮಾಡಿಕೊಡಲು ಸಭೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ಒಳಮೀಸಲಾತಿ ಜಾರಿ ಕಾಂಗ್ರೆಸ್‌‍ ಸರ್ಕಾರದ ಬದ್ಧತೆಯಾಗಿದೆ. ಆದರೆ ಈ ವಿಚಾರವಾಗಿ ಆಡಳಿತ ಪಕ್ಷದ ಶಾಸಕರಲ್ಲೇ ಒಮತದ ಕೊರತೆಯಿದೆ. ಈ ಕಾರಣಕ್ಕೆ ಮುಂದಿನ ದಿನಗಳಲ್ಲಿ ಸಚಿವರು ಶಾಸಕರಾದಿಯಾಗಿ ಯಾರೂ ಕೂಡ ಬಹಿರಂಗ ಟೀಕೆ ಮಾಡಬಾರದು. ಅನಗತ್ಯ ಹೇಳಿಕೆಗಳನ್ನು ನೀಡಬಾರದು ಎಂಬ ಹಿನ್ನೆಲೆಯಲ್ಲಿ ವಾಸ್ತವಾಂಶಗಳನ್ನು ಮನವರಿಕೆ ಮಾಡಿಕೊಡಲು ಸಿದ್ದರಾಮಯ್ಯ ಪರಮೇಶ್ವರ್‌ ಅವರಿಗೆ ಜವಬ್ದಾರಿ ನೀಡಿದ್ದಾರೆ ಎಂಬ ಮಾತಿದೆ.

Leave a Reply

Your email address will not be published. Required fields are marked *

error: Content is protected !!