ಉದಯವಾಹಿನಿ, ಲಕ್ನೋ: ಬೊಲೆರೊ ಕಾರು ಸರಯೂ ನದಿಗೆ ಬಿದ್ದು 11 ಜನರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ. ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಗೊಂಡಾಯಲ್ಲಿ ಘಟನೆ ನಡೆದಿದೆ. ಮೃತರು ಸಿಹಗಾಂವ್‌ನಿಂದ ಖರ್ಗುಪುರದ ಪೃಥ್ವಿನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಹಾಗೂ ಪವಿತ್ರ ನೀರು ಅರ್ಪಿಸಲು ಬೊಲೆರೊ ಕಾರಿನಲ್ಲಿ ಹೊರಟಿದ್ದರು. ಬೆಲ್ವಾ ಬಹುತಾ ಬಳಿ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಚಾಲಕ ಸೇರಿದಂತೆ 15 ಜನರಿದ್ದ ಕಾರು ಸರಯೂ ನದಿಗೆ ಬಿದ್ದಿದೆ.
ಕಾರು ನದಿಗೆ ಬೀಳುತ್ತಿದ್ದಂತೆ ಗ್ರಾಮಸ್ಥರು ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಆನಂತರ ಗ್ರಾಮಸ್ಥರು ಮತ್ತು ರಕ್ಷಣಾ ತಂಡದ ಸಹಾಯದಿಂದ 11 ಮೃತದೇಹಗಳನ್ನ ಹೊರತೆಗೆದಿದ್ದಾರೆ. ಇನ್ನುಳಿದ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಘಟನೆಯ ತನಿಖೆ ಪ್ರಾರಂಭವಾಗಿದೆ.
ಪಿಎಂ, ಸಿಎಂ ಸಂತಾಪ: ಘಟನೆ ಕುರಿಯು ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
