ಉದಯವಾಹಿನಿ, ತಿರುವನಂತಪುರಂ: ಬಡವರು ಮತ್ತು ಹಿಂದುಳಿದವರಿಗಾಗಿ ದಶಕಗಳ ಕಾಲ ಸೇವೆ ಸಲ್ಲಿಸಿ ʻಎರಡು ರೂಪಾಯಿ ಡಾಕ್ಟರ್‌ʼ ಎಂದೇ ಖ್ಯಾತರಾಗಿದ್ದ ಕೆರಳದ ಕಣ್ಣೂರಿನ ಡಾ.ಎ.ಕೆ. ರೈರು ಗೋಪಾಲ್ (80) ಭಾನುವಾರ ನಿಧನರಾದರು.50 ವರ್ಷಗಳಿಗೂ ಹೆಚ್ಚು ಕಾಲ, ಡಾ. ರೈರು ಗೋಪಾಲ್ ರೋಗಿಗಳಿಗೆ ಹೆಸರಿಗಷ್ಟೇ 2 ರೂ. ಶುಲ್ಕ ವಿಧಿಸಿ ಸೇವೆ ಸಲ್ಲಿಸಿದ್ದರು. ಇದೇ ಕಾರಣಕ್ಕೆ ಜನ ಅವರನ್ನು ಪ್ರೀತಿಯಿಂದ 2 ರೂ. ಡಾಕ್ಟರ್‌ ಎಂದು ಕರೆಯಲು ಆರಂಭಿಸಿದ್ದರು. ನಂತರ 40 ರಿಂದ 50 ರೂ. ಶುಲ್ಕವನ್ನು ನಿಗದಿಪಡಿಸಿದ್ದರು.
ಮನೆ ಭೇಟಿಯ ಸಮಯದಲ್ಲಿ ರೋಗಿಗಳ ಭೀಕರ ಸ್ಥಿತಿಯನ್ನು ಕಂಡು ಅವರು ಸ್ವಯಂಸೇವೆಯನ್ನು ಅರಂಭಿಸಿದರು. ವಿದ್ಯಾರ್ಥಿಗಳು ಮತ್ತು ಬಡವರು, ಕಾರ್ಮಿಕರ ಸಲುವಾಗಿ, ಕೆಲವೊಮ್ಮೆ ಬೆಳಗಿನ ಜಾವ 3:00 ಗಂಟೆಯಿಂದಲೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ದಿನಕ್ಕೆ 300ಕ್ಕೂ ಹೆಚ್ಚು ಜನರಿಗೆ ಇವರು ಚಿಕಿತ್ಸೆ ನೀಡಿದ್ದಾರೆ. ಬೆಳಗಿನ ಜಾವ 2:15ಕ್ಕೆ ಎದ್ದು, ಮೊದಲು ತಮ್ಮ ಹಸುಗಳನ್ನು ನೋಡಿಕೊಂಡು, ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿ, ಹಾಲು ಸಂಗ್ರಹಿಸುತ್ತಿದ್ದರು. ಪ್ರಾರ್ಥನೆ ಮತ್ತು ಹಾಲು ವಿತರಣೆಯ ನಂತರ, ಬೆಳಿಗ್ಗೆ 6:30ರ ಹೊತ್ತಿಗೆ ಥಾನ್ ಮಾಣಿಕ್ಕಕಾವು ದೇವಸ್ಥಾನದ ಬಳಿಯಿರುವ ತಮ್ಮ ಮನೆಯಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು.
ಅವರ ಪತ್ನಿ ಡಾ. ಶಕುಂತಲಾ ಮತ್ತು ಸಹಾಯಕರು ಜನಸಂದಣಿಯನ್ನು ನಿರ್ವಹಿಸುವಲ್ಲಿ ಮತ್ತು ಔಷಧಿಗಳನ್ನು ವಿತರಿಸುವಲ್ಲಿ ಅವರಿಗೆ ಸಹಕಾರ ನೀಡುತ್ತಿದ್ದರು. ಎಲ್ಲಾ ಕಾರ್ಪೊರೇಟ್ ಪ್ರೋತ್ಸಾಹಗಳನ್ನು ತಿರಸ್ಕರಿಸಿ ಮತ್ತು ಔಷಧ ಪ್ರತಿನಿಧಿಗಳನ್ನು ನಿರಾಕರಿಸಿ ಕಡಿಮೆ ಬೆಲೆಯ, ಪರಿಣಾಮಕಾರಿ ಔಷಧಿಗಳನ್ನು ಮಾತ್ರ ಅವರು ಸೂಚಿಸುತ್ತಿದ್ದರು.

Leave a Reply

Your email address will not be published. Required fields are marked *

error: Content is protected !!